ನವದೆಹಲಿ,ಮೇ1(DaijiworldNews/AZM): ಬಿಎಸ್ಎಫ್ ಯೋದ ತೇಜ್ ಬಹದ್ದೂರ್ ಯಾದವ್ ಮಂಗಳವಾರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಇದೀಗ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೇಜ್ ಬಹದ್ದೂರ್ ಯಾದವ್ ಸ್ಪರ್ಧೆಗಿಳಿದಿದ್ದರು.
ಇನ್ನು ಚುನಾವಣಾ ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. “ನನ್ನ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಿದ್ದಾರೆ. ಮಂಗಳವಾರ ಸಂಜೆ 6:15ಕ್ಕೆ ಸಾಕ್ಷ್ಯಕೊಡುವಂತೆ ಕೇಳಿದ್ದರು. ನಾವು ಅದನ್ನು ಒದಗಿಸಿದೆವು. ಆದರೂ ನಾಮಪತ್ರ ತಿರಸ್ಕಾರವಾಗಿದೆ. ನಾವು ಸುಪ್ರೀಂ ಕೋರ್ಟ್ನಲ್ಲಿ ಇದನ್ನು ಪ್ರಶ್ನಿಸುತ್ತೇವೆ” ಎಂದು ತೇಜ್ ಬಹದ್ದೂರ್ ಹೇಳಿದ್ಧಾರೆ. ಸಮಾಜವಾದಿ ಪಕ್ಷದ ವಕೀಲರೂ ಕೂಡ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ನನ್ನ ಬಗ್ಗೆ ಭಯ ಇದೆ. ಹೀಗಾಗಿ ನನಗೆ ಅಡೆತಡೆಗಳನ್ನು ನಿರ್ಮಿಸುತ್ತಿದ್ಧಾರೆ. ನಾನು ನಾಮಪತ್ರ ಸಲ್ಲಿಸಿದ ದಿನದಿಂದಲೂ ಇದೇ ಪ್ರಯತ್ನಗಳು ನಡೆಯುತ್ತಿವೆ” ಎಂದು ತೇಜ್ ಬಹದ್ದೂರ್ ಹೇಳಿದ್ಧಾರೆ.
ಎರಡು ವರ್ಷದ ಹಿಂದೆ ಬಿಎಸ್ಎಫ್ನಲ್ಲಿ ಕಾನ್ಸ್ಟೆಬಲ್ ಆಗಿದ್ದ ತೇಜ್ ಬಹದ್ದೂರ್ ಯಾದವ್ ಅವರು ಗಡಿಕಾಯುವ ಯೋಧರ ದುಸ್ಥಿತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿ ಇಡೀ ದೇಶದ ಗಮನ ಸೆಳೆದಿದ್ದರು. ಅದಾದ ಬಳಿಕ ಅವರನ್ನು ಸೇವೆಯಿಂದಲೇ ವಜಾ ಮಾಡಲಾಯಿತು.
ಇದೀಗ ರಾಜಕೀಯವಾಗಿ ಹೋರಾಡಲು ನಿರ್ಧರಿಸಿದ ತೇಜ್ ಬಹದ್ದೂರ್ ಅವರು ವಾರಾಣಸಿಯಲ್ಲಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ, ಸಮಾಜವಾದಿ ಪಕ್ಷವು ತಾನು ನಿಲ್ಲಿಸಿದ್ದ ಅಭ್ಯರ್ಥಿಯನ್ನು ವಾಪಸ್ ಪಡೆದು ತೇಜ್ ಬಹದ್ದೂರ್ಗೆ ಟಿಕೆಟ್ ಕೊಡುವ ಅಚ್ಚರಿಯ ನಿರ್ಧಾರ ಪ್ರಕಟಿಸಿತು.