ದೆಹಲಿ, ಏ 03(DaijiworldNews/AA): ಸಚಿವೆ ಅತಿಶಿ ಅವರು ಬಿಜೆಪಿಯು ದೆಹಲಿಯಲ್ಲಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಈ ಹೇಳಿಕೆಯ ವಿರುದ್ಧ ಬಿಜೆಪಿಯು ಮಾನನಷ್ಟ ಮೊಕದ್ದಮೆ ಹೂಡಿದೆ.
ಬಿಜೆಪಿಗೆ ಸೇರದಿದ್ದರೆ ಬಂಧಿಸುವುದಾಗಿ ಆಪ್ತ ವ್ಯಕ್ತಿಗಳ ಮೂಲಕ ಬೆದರಿಕೆ ಹಾಕಲಾಗಿದೆ. ಜೊತೆಗೆ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಮತ್ತು ದುರ್ಗೇಶ್ ಪಾಠಕ್ ಅವರನ್ನು ಕೂಡ ಬಂಧಿಸಲಾಗುವುದು ಎಂದು ಬೆದರಿಕೆ ಬಂದಿರುವ ಬಗ್ಗೆ ಸಚಿವೆ ಅತಿಶಿ ಅವರು ಆರೋಪ ಮಾಡಿದ್ದರು.
ಅತಿಶಿ ಅವರು ಬಿಜೆಪಿ ವಿರುದ್ಧ ಮಾಡಿರುವ ಆರೋಪಕ್ಕೆ ಬಿಜೆಪಿಯು ಸಾಕ್ಷಿ ಕೇಳಿತ್ತು. ಆದರೆ ಸಚಿವೆ ಅವರ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ನೀಡಿರಲಿಲ್ಲ. ಈ ಹಿನ್ನೆಲೆ ಇಂತಹ ಸುಳ್ಳು ಆರೋಪಗಳು ಬಿಜೆಪಿ ಮತ್ತು ಅದರ ಕಾರ್ಯಕರ್ತರ ರಾಜಕೀಯ ಹಾಗೂ ಸಾಮಾಜಿಕ ಚಿತ್ರಣವನ್ನು ಹಾಳು ಮಾಡುತ್ತದೆ. ಹೀಗಾಗಿ ಅತಿಶಿ ಅವರಿಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ನೀಡಲಾಗಿದ್ದು, ಆರೋಪಗಳನ್ನು ಹಿಂಪಡೆದು ಬಹಿರಂಗವಾಗಿ ಬಿಜೆಪಿಗೆ ಕ್ಷಮೆ ಕೇಳುವಂತೆ ತಿಳಿಸಲಾಗಿದೆ.
ಅತಿಶಿ ಅವರು ನೋಟಿಸ್ ಗೆ ಪ್ರತಿಕ್ರಿಯೆ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ನೋಟಿಸ್ ಗೆ ಅತಿಶಿ ಸ್ಪಂದಿಸದೇ ಇದ್ದರೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಪಕ್ಷದ ಮಾಧ್ಯಮ ಮುಖ್ಯಸ್ಥ ಮತ್ತು ವಕ್ತಾರ ಪ್ರವೀಣ್ ಶಂಕರ್ ಕಪೂರ್ ಅವರು ಎಚ್ಚರಿಕೆ ನೀಡಿದ್ದಾರೆ. ಇನ್ನು ಅತಿಶಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ ಅವರು ಸಚಿವೆ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಗುಡುಗಿದ್ದರು.