ಮುಂಬೈ,ಮೇ1(DaijiworldNews/AZM): ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಇಂದು ಘೋಷಿಸಿದೆ. ಈ ಮೂಲಕ ಭಾರತದ ಮೂರ್ನಾಲ್ಕು ವರ್ಷಗಳ ಹೋರಾಟಕ್ಕೆ ಫಲ ದೊರೆತಂತ್ತಾಗಿದೆ.
ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದ ಮಸೂದ್ ಅಜರ್ ನನ್ನು ಜಾಗತಿಕ ಮಟ್ಟದಲ್ಲಿ ದಿಗ್ಬಂಧನ ಹಾಕಲು ಭಾರತ ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿತ್ತು. ಆದರೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ 14 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಹೊರತು ಪಡಿಸಿ ಉಳಿದೆಲ್ಲಾ ರಾಷ್ಟ್ರಗಳು ಬೆಂಬಲ ಸೂಚಿಸಿದ್ದವು.
ಭಾರತದ ಪರವಾಗಿ ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ರಾಷ್ಟ್ರಗಳು ಮಸೂದ್ ಅಜರ್ ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತಿ ಬಾರಿ ಪ್ರಸ್ತಾವನೆ ಸಲ್ಲಿಕೆಯಾದಾಗಲು ಚೀನಾ ತನ್ನ ವಿಟೋ ಅಧಿಕಾರ ಚಲಾಯಿಸಿ ಅಡ್ಡಿ ಪಡಿಸುತ್ತಿತ್ತು.
ಪುಲ್ವಾಮ, ಬಾಲಕೋಟ್ ನಲ್ಲಿ ಉಗ್ರ ದಾಳಿ ನಂತರ ಜಾಗತಿಕ ಪ್ರಭಾವಿ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತು ಚೀನಾ ಮೇಲೆ ಒತ್ತಡ ಹೇರಿದ್ದವು. ಈ ಎಲ್ಲದರ ಪರಿಣಾಮ ಇಂದು ಉಗ್ರ ಮಸೂದ್ ಅಜರ್ ಜಾಗತಿಕ ಉಗ್ರ ಎಂದು ಘೋಷಣೆ ಮಾಡಲಾಗಿದೆ.