ಬೆಂಗಳೂರು,ಮೇ1(DaijiworldNews/AZM):ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರಾಹುಲ್ಗಾಂಧಿ ಅವರ ಪೌರತ್ವವನ್ನು ಪ್ರಶ್ನಿಸುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಅವರು ಮಾತನಾಡಿದರು. ರಾಹುಲ್ಗಾಂಧಿ ಅವರ ತಾತ, ಅಜ್ಜಿ, ತಂದೆ ಎಲ್ಲರ ಬಗ್ಗೆ ದೇಶಕ್ಕೆ ಗೊತ್ತಿದೆ. ಆದರೂ 2015ರಲ್ಲಿ ಸುಬ್ರಹ್ಮಣ್ಯಸ್ವಾಮಿ ನೀಡಿದ ದೂರನ್ನು ನಾಲ್ಕು ವರ್ಷ ತಟಸ್ಥವಾಗಿಟ್ಟು ಚುನಾವಣೆ ವೇಳೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ವಜಾಗೊಳಿಸಿರುವ ಪ್ರಕರಣ ಇದಾಗಿದ್ದು, ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಈಗ ನೋಟಿಸ್ ನೀಡಿರುವುದು ಕೀಳುಮಟ್ಟದ ರಾಜಕಾರಣ. ಅಧಿಕಾರ ದುರುಪಯೋಗದ ಸ್ಪಷ್ಟ ಉದಾಹರಣೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ದೇಶವನ್ನು ಅಧೋಗತಿಯತ್ತ ತೆಗೆದುಕೊಂಡು ಹೋಗಿದೆ. ನೋಟು ಅಮಾನ್ಯೀಕರಣದಿಂದಾಗಿ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಬಿಜೆಪಿಯ ನೀತಿಗಳು ಕಾರ್ಮಿಕ ವಿರೋಧಿಯಾಗಿವೆ. ಸಣ್ಣಪುಟ್ಟ ವ್ಯಾಪಾರಗಳು, ಉದ್ಯಮಗಳು ನೋಟು ಅಮಾನೀಕರಣದ ನಂತರ ಮುಚ್ಚಿಹೋಗಿವೆ. ಲಕ್ಷಾಂತರ ರೂ. ಸಾಲ ಪಡೆದು ದೇಶ ಬಿಟ್ಟು ಹೊಗುವವರಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.