ಹುಬ್ಬಳ್ಳಿ, ಏ 07 (DaijiworldNews/AA): ಸಿಎಂ ಸಿದ್ದರಾಮಯಗಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ತಾನಕ್ಕಿಂತ ಕಡೆ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸ್ ಪಠಣೆ ಮಾಡಿದವರ ಮೇಲೆ ಎಫ್ಐಆರ್ ದಾಖಲು ಮಾಡುತ್ತೀರಿ. ಇದು ತುಷ್ಟೀಕರಣದ ಪರಾಕಾಷ್ಠೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ನಾನು ಖಂಡಿಸುತ್ತೇನೆ. ಇದು ವೋಟ್ಬ್ಯಾಂಕ್ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ನನ್ನ ಮಕ್ಕಳು ರಾಹುಲ್ ಗಾಂಧಿಯ ಹಾಗೆ ಆಗಬೇಕು ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಸಂತೋಷ್ ಲಾಡ್ ಹಾಗೆ ಹೇಳದಿದ್ದರೆ ಅವರ ಕೆಲಸ ಹೋಗುತ್ತದೆ. 75 ವರ್ಷ ಇವರು ಸುಳ್ಳು ಹೇಳಿದ್ದಾರೆ. ನೀವು ಸತ್ಯಹರಿಶ್ಚಂದ್ರರಾಗಿದ್ದರೆ ಜನರು ಯಾಕೆ ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದರು ಎಂದು ಕಿಡಿಕಾರಿದ್ದಾರೆ.