ಬೆಂಗಳೂರು, ಏ 08 (DaijiworldNews/AA): ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಶಂಕಿತ ಉಗ್ರ ಮಾಜ್ ಮುನೀರ್ ಕೈವಾಡವಿರುವುದು ವಿಚಾರಣೆ ವೇಳೆ ದೃಢಪಟ್ಟಿದೆ.
ಮಾ. 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಾಂಬಗ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಎನ್ಐಎ ಅಧಿಕಾರಿಗಳು ಮಾ. 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು. ಈ ವೇಳೆ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್ ಮುನೀರ್ನನ್ನು ಕೂಡ ವಶಕ್ಕೆ ಪಡೆಯಲಾಗಿತ್ತು. ಶಂಕಿತ ಉಗ್ರನನ್ನು ಸತತ 8 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿತ್ತು. ಇದೀಗ ವಿಚಾರಣೆ ವೇಳೆ ಶಂಕಿತ ಉಗ್ರ ಸತ್ಯ ಬಾಯಿ ಬಿಟ್ಟಿರುವುದಾಗಿ ತಿಳಿದುಬಂದಿದೆ.
ಶಂಕಿತ ಉಗ್ರ ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ಎನ್ಐಎ ಅಧಿಕಾರಿಗಳು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಕೆಲ ಕೋಡ್ ವರ್ಡ್ ಗಳನ್ನು ಬರೆಯಲಾಗಿತ್ತು. ಇವುಗಳನ್ನು ಎನ್ಐಎ ಅಧಿಕಾರಿಗಳು ಡಿಕೋಡ್ ಮಾಡಿದ್ದು, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಶಂಕಿತ ಉಗ್ರ ಜೈಲಿನಲ್ಲಿ ಇದ್ದುಕೊಂಡೇ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಬುದು ಈ ಮೂಲಕ ಪತ್ತೆಯಾಗಿತ್ತು.