ಬೆಂಗಳೂರು, ಏ 09 (DaijiworldNews/MS): ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಅವರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಹಾರ ಹಾಕಿರುವ ವಿಚಾರ ತೀವ್ರ ಆತಂಕಕ್ಕೆ ಕಾರಣವಾದ ಹಿನ್ನಲೆ, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿತ್ತು. ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಸೌಮ್ಯರೆಡ್ಡಿ ನಿಂತಿದ್ದ ಕ್ಯಾಂಟೆರ್ ಮೇಲೆ ಹತ್ತಿದ ವ್ಯಕ್ತಿಯೋರ್ವ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದ್ದ. ಈ ವೇಳೆ ಆತನ ಸೊಂಟದಲ್ಲಿ ಗನ್ ಇರುವುದು ಪತ್ತೆಯಾಗಿದೆ. ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ರಿಯಾಜ್ ಅಹಮದ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ
ರಿಯಾಜ್ ತನಗೆ ಜೀವ ಭಯ ಇದೆ ಎಂದು ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದ. ಅಲ್ಲದೇ ಎಲೆಕ್ಷನ್ ಟೈಮಲ್ಲಿ ಗನ್ ಸರೆಂಡರ್ ಮಾಡದಿರಲು ಸಹ ಅನುಮತಿ ಪಡೆದಿದ್ದ. ಆದರೆ ಸಿಎಂ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರಿಯಾಜ್ನನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ.ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಎಂದು ರಿಯಾಜ್ ಹೇಳಿರುವುದಾಗಿ ತಿಳಿದು ಬಂದಿದೆ.
ಜೆಡಿಎಸ್ ನಾಯಕ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಬಿಜೆಪಿ ಪ್ರಮುಖರು ಇದು ಭದ್ರತಾ ಲೋಪ ಎಂದು ಹೇಳಿದ್ದಾರೆ.