ನವದೆಹಲಿ, ಮೇ02(Daijiworld News/SS): ಶ್ರೀಲಂಕಾದಲ್ಲಿ ಉಗ್ರರ ದಾಳಿಯ ಬಳಿಕ ಬುರ್ಖಾ ಧರಿಸಿ ಓಡಾಡುವುದನ್ನು ನಿಷೇಧಿಸಿದ ಬೆನ್ನಲ್ಲೇ, ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾವನ್ನು ಕಡ್ಡಾಯವಾಗಿ ನಿಷೇಧ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶಿವಸೇನಾ ಆಗ್ರಹಿಸಿದೆ.
ಆದರೆ ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್, ಬುರ್ಖಾ ನಿಷೇಧಿಸಬೇಕೆಂಬ ಶಿವಸೇನಾದ ಆಗ್ರಹವನ್ನು ವಿರೋಧಿಸಿದ್ದಾರೆ. ಮಾತ್ರವಲ್ಲ, ಭಾರತದಲ್ಲಿ ಬುರ್ಖಾ ನಿಷೇಧ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎನ್ಡಿಎ ಮಿತ್ರಕೂಟದಲ್ಲಿರುವ ಸಚಿವ ರಾಮದಾಸ್ ಅಠವಲೆ ಕೂಡ ಈ ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುರ್ಖಾ ಧರಿಸುವ ಎಲ್ಲಾ ಮಹಿಳೆಯರೂ ಉಗ್ರರಲ್ಲ. ಅವರು ಉಗ್ರರಾಗಿದ್ದರೆ ಅವರ ಬುರ್ಖಾವನ್ನು ತೆಗೆದುಹಾಕಬೇಕು. ಇದೊಂದು ಸಂಪ್ರದಾಯ. ಅದನ್ನು ಧರಿಸುವುದು ಅವರ ಹಕ್ಕು. ಭಾರತದಲ್ಲಿ ಬುರ್ಖಾ ಮೇಲೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮಾತ್ರವಲ್ಲ, ಬುರ್ಖಾ ನಿಷೇಧಿಸುವ ಒತ್ತಾಯವನ್ನು ಬಿಜೆಪಿ ಬೆಂಬಲಿತ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ವಿರೋಧಿಸಿದ್ದಾರೆ. ಇದು ಬೇಜವಾಬ್ದಾರಿಯುತ ಮತ್ತು ಅಸಂವಿಧಾನಿಕ ಬೇಡಿಕೆ. ಬುರ್ಖಾ ಧರಿಸಬೇಕೇ ಅಥವಾ ಬೇಡವೇ ಎನ್ನುವುದು ಮುಸ್ಲಿಂ ಮಹಿಳೆಯರಿಗೆ ಬಿಟ್ಟಿದ್ದು ಎಂದು ರಿಜ್ವಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಸರಣಿ ಸ್ಫೋಟ ನಡೆದ ಬೆನ್ನಲ್ಲೇ, ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವಂತೆ ಮುಸುಕು ಧರಿಸುವುದನ್ನು ನಿಷೇಧ ಮಾಡಲಾಗಿದೆ. ಯಾವುದೇ ವ್ಯಕ್ತಿ ಗುರುತು ಮರೆಮಾಚುವಂತೆ ಯಾವುದೇ ಬಟ್ಟೆಯಿಂದ ಮುಸುಕು ಧರಿಸಬಾರದು ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಆದೇಶ ನೀಡಿದ್ದಾರೆ.