ನವದೆಹಲಿ, ಏ 10(DaijiworldNews/AA): ದಾರಿ ತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ಹಾಗೂ ಪತಂಜಲಿ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಸಲ್ಲಿಸಿದ್ದ ಕ್ಷಮೆಯಾಚನೆ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಹಾಗೂ ನಾವೇನು ಕುರುಡರಲ್ಲ, ಈ ವಿಚಾರದಲ್ಲಿ ನಾವು ಉದಾರವಾದಿಯಾಗಲು ಬಯಸುವುದಿಲ್ಲ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ.
ರಾಮ್ದೇವ್ ಮತ್ತು ಬಾಲಕೃಷ್ಣ ಮಂಗಳವಾರ ಸುಪ್ರೀಂ ಕೋರ್ಟ್ ಗೆ 'ಬೇಷರತ್ ಕ್ಷಮೆ' ಕೇಳಿದ್ದರು. ಆದರೆ ಇದೀಗ "ಕ್ಷಮಾಪಣೆ ಕಾಗದದ ಮೇಲಿದೆ. ಅದನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ. ಇದು ಉದ್ದೇಶಪೂರ್ವಕ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸುವುದಾಗಿ" ಸುಪ್ರೀಂ ಪೀಠದ ನ್ಯಾಯಾಧೀಶರಾದ ಹಿಮಾ ಕೊಹ್ಲಿ ಮತ್ತು ನ್ಯಾಯಾಧೀಶರಾದ ಎ.ಅಮಾನುಲ್ಲಾ ರಾಮ್ದೇವ್ ಮತ್ತು ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪ್ರಕರಣದ ವಿಚಾರಣೆ ಆರಂಭವಾದಾಗಿನಿಂದಲೂ ರಾಮ್ ದೇವ್ ಮತ್ತು ಬಾಲಕೃಷ್ಣ ಕ್ಷಮಾಪಣೆಯನ್ನು ಮೊದಲು ಮಾಧ್ಯಮಗಳಿಗೆ ಕಳುಹಿಸುತ್ತಿರುವುದನ್ನು ಪೀಠ ಗಮನಿಸಿದೆ. ವಿಷಯ ಕೋರ್ಟ್ ನಲ್ಲಿ ಇರುವಾಗಲೇ ಅಫಿಡವಿತ್ ಸಲ್ಲಿಸದೇ, ಮೊದಲು ಮಾಧ್ಯಮಗಳಿಗೆ ಕ್ಷಮಾಪಣೆ ಪತ್ರ ಕಳುಹಿಸುತ್ತಾರೆ. ಇದೊಂದು ಪ್ರಚಾರದ ಗೀಳು ಎಂದು ನ್ಯಾಯಾಧೀಶರಾದ ಕೊಹ್ಲಿ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪರವಾನಿಗೆ ಇನ್ಸ್ ಪೆಕ್ಟರ್ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ಬಾರಿಯಾದರೂ 3 ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಸುಪ್ರೀಂ ಹೇಳಿದೆ.