ರಾಯಚೂರು, ಮೇ02(Daijiworld News/SS): ಸಿಐಡಿ ಪೋಲಿಸರು ಇಂಜಿನಿಯರ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ಆರೋಪಿ ಸುದರ್ಶನ್ನ್ನು ಈಗಾಗಲೇ ಪೋಲಿಸರು ವಶಕ್ಕೆ ಪಡೆದಿದ್ದಾರೆ. ತನಿಖೆಗಾಗಿ ಆತನನ್ನು ಕಳೆದ 9 ದಿನಗಳಿಂದ ಸಿಐಡಿ ಅಡಿಯಲ್ಲಿರಿಸಿಕೊಂಡಿತ್ತು. ಇದೀಗ ಸಿಐಡಿ ಡಿವೈಎಸ್ಪಿ ಕೆ. ರವಿಶಂಕರ್ ನೇತೃತ್ವದ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದು ಪ್ರಕರಣಕ್ಕೆ ಪುಷ್ಟಿ ನೀಡಿದೆ.
ಮಂತ್ರಾಲಯ ಮತ್ತು ಆದೋನಿಯಲ್ಲಿ ಸುದಶರ್ನ್ ಹಾಗೂ ವಿದ್ಯಾರ್ಥಿನಿ ಸುತ್ತಾಡಿದ್ದರು ಎಂಬುದು ದೃಢವಾಗಿದೆ. ಪೋಲಿಸರು ಅವರು ಸುತ್ತಾಡಿರುವ ಐದು ಕಡೆ ಸಿಸಿಟಿವಿ ದಾಖಲೆಯನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲ, ಲಾಡ್ಜ್ನ ನೋಂದಣಿ ಪುಸಕ್ತದಲ್ಲಿ ಅವರು ಹೆಸರನ್ನು ನೋಂದಣಿ ಮಾಡಿದ್ದು, ಆ ಪುಸಕ್ತವನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆಯೂ ಇವರಿಬ್ಬರೂ ಜತೆಯಾಗಿ ಸುತ್ತಾಡಿದ್ದರು ಎಂಬುವುದಕ್ಕೆ ಪೂರಕವಾಗಿ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಸಿಐಡಿ ಪೋಲಿಸರು ತಿಳಿಸಿದ್ದರು.
ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಏಪ್ರಿಲ್ 13ರಂದು ಪರೀಕ್ಷೆ ಬರೆಯಲು ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಏಪ್ರಿಲ್ 16ರಂದು ಆಕೆಯ ಶವ ಕಾಲೇಜಿನಿಂದ 4 ಕಿ.ಮೀ.ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಲಾಗುತ್ತಿದೆ.