ನವದೆಹಲಿ, ಮೇ02(Daijiworld News/SS): ಆಮ್ ಆದ್ಮಿ ಪಕ್ಷದ ಕೆಲ ಶಾಸಕರಿಗೆ ಬಿಜೆಪಿಯು 10 ಕೋಟಿ ರೂ.ಗಳ ಆಮಿಷವೊಡ್ಡಿ ಅವರನ್ನು ಖರೀದಿಸಲು ಪ್ರಯತ್ನ ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಯು ಅವರಿಗೆ ತಲಾ 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ, ಬಿಜೆಪಿಗೆ ಸೇರುವಂತೆ ಒತ್ತಾಯಿಸಿದೆ. ಕೇವಲ ಮೂರು ದಿನಗಳಲ್ಲಿ ಎಎಪಿಯ 7 ಶಾಸಕರು ಈ ಬಗ್ಗೆ ಬಂದು ನನ್ನ ಬಳಿ ಹೇಳಿದ್ದಾರೆ. ಅವರು ನಮ್ಮ ಶಾಸಕರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದೆರಡು ದಿನಗಳ ಹಿಂದಷ್ಟೇ ನಾವು ನಲವತ್ತು ಶಾಸಕರನ್ನು ಖರೀದಿಸಿ ಮಮತಾ ಬ್ಯಾನರ್ಜಿ ಸರ್ಕಾರ ಬೀಳುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಇಂಥ ಮಾತುಗಳು ಅವರ ಹುದ್ದೆಗೆ ಸರಿ ಹೊಂದುವುದಿಲ್ಲ ಎಂದು ಹೇಳಿದರು.
ದೇಶದ ಜನರು ಎಎಪಿಯ ಕೆಲಸ ನೋಡಿ ಮತ ಹಾಕುತ್ತಾರೆ. ನಾವು ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಮೋದಿ ತಮ್ಮ ಹೆಸರಿನ ಮೂಲಕ ಮತ ಕೇಳಬಹುದು. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ. ಹೆಸರು ಹೇಳುತ್ತಾ ಮತ ಕೇಳುವ ಪಕ್ಷ ನಮ್ಮದಲ್ಲ ಎಂದು ತಿಳಸಿದರು.