ನವದೆಹಲಿ, ಮೇ 02 (Daijiworld News/MSP): ಶ್ರೀಲಂಕಾದಲ್ಲಿ ಉಗ್ರದಾಳಿ ನಡೆದ ಬಳಿಕ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಬುರ್ಖಾ ನಿಷೇಧ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಸಂಬಂಧ ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಸ್ತಾಪಿಸಿದ್ದು, ಇದಕ್ಕೆ ವಿಶ್ವಹಿಂದೂ ಪರಿಷತ್ ಕೂಡಾ ಬೆಂಬಲಿದೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ಲೀಗ್ ನ ಮುಖಂಡ ಅಸಾವುದ್ದೀನ್ ಒವೈಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕಾಗಿ ಉಡುಗೆಗಳಿಗೆ ನಿಷೇಧ ಹೇರುವುದು ಸರಿಯಲ್ಲ. ಭಯೋತ್ಪಾದನೆ ಎನ್ನುವುದೇ ಇತ್ತೀಚೆಗೆ ಒಂದು ಧರ್ಮವಾಗಿದೆ ಎಂದಿದ್ದಾರೆ.
ಒಂದು ವೇಳೆ ಭಾರತದಲ್ಲಿ ಬುರ್ಖಾ ನಿಷೇಧ ಮಾಡುವುದಾದರೆ, ಇಲ್ಲಿ ಮಹಿಳೆಯರು ಹಾಕಿಕೊಳ್ಳುವ ಗೂಂಗಟ್ ನ್ನು (ಸೆರಗಿನಿಂದ ಮುಖ ಮುಚ್ಚಿಕೊಳ್ಳುವುದು) ನಿಮಗೆ ನಿಷೇಧಿಸಲು ಸಾಧ್ಯವೆ ? ಒಂದು ವೇಳೆ ಉಡುಗೆತೊಡುಗೆಗಳಿಂದ ಭಯೋತ್ಪಾದನೆಯನ್ನು ನಿರ್ಧರಿಸುವುದಾದರೆ ಸಾಧ್ವಿ ಪ್ರಗ್ಯಾ ಧರಿಸಿರುವುದು ಯಾವ ವಸ್ತ್ರ ? ಚುನಾವಣೆ ಸಂದರ್ಭ ಶಿವಸೇನೆ ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಈ ಬಗ್ಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದಿದ್ದಾರೆ.
ಸಂವಿಧಾನದಲ್ಲಿ ವ್ಯಕ್ತಿಯ ಗೌಪ್ಯತೆ ಕಾಪಾಡಿಕೊಳ್ಳಬೇಕು ಎನ್ನುವ ನಿಯಮ ಇದೆ. ಶಿವಸೇನೆಯ ಈ ಬೇಡಿಕೆ ನೀತಿಸಂಹಿತೆಯ ಉಲ್ಲಂಘನೆಯಾಗಿದೆ. ಶಿವಸೇನೆಯ ನಾಯಕರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲ. ನಮ್ಮ ವೈಯಕ್ತಿಕ ಆಯ್ಕೆ ನಮ್ಮ ಮೂಲಭೂತ ಹಕ್ಕು ಎಂದು ಅವರು ಹೇಳಿದ್ದಾರೆ.