ಹೊಸದಿಲ್ಲಿ, ಮೇ02(Daijiworld News/SS): ಸಿಬಿಎಸ್ಇ 12ನೇ ತರಗತಿಯ 2019ರ ಫಲಿತಾಂಶ ಇಂದು ಪ್ರಕಟವಾಗಿದ್ದು, ದೇಶಾದ್ಯಂತ ಶೇ.83.4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೊಸ ದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸಿಬಿಎಸ್ಇ 12ನೇ ತರಗತಿಯ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು, ಸುದ್ದಿಗೋಷ್ಠಿ ಬಳಿಕ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಪ್ರಾಂತ್ಯವಾರು ಫಲಿತಾಂಶದಂತೆ, ತಿರುವನಂತಪುರಂ ಶೇ.98.2 ಉತ್ತೀರ್ಣತೆಯ ಮೂಲಕ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಶೇ.92.93 ಹಾಗೂ ದಿಲ್ಲಿ ಶೇ.91.87 ಇದೆ.
500ರಲ್ಲಿ 499 ಅಂಕಗಳನ್ನು ಪಡೆದಿರುವ ಹನ್ಸಿಕಾ ಶುಕ್ಲಾ ಹಾಗೂ ಕರಿಷ್ಮಾ ಅರೋರಾ, ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಹಿಂದಿನಂತೆಯೇ ಹೆಣ್ಣು ಮಕ್ಕಳು ಹುಡುಗರಿಗಿಂತ ಶೇ.9ರಷ್ಟು ಉತ್ತಮ ನಿರ್ವಹಣೆ ತೋರಿದ್ದಾರೆ. ಶೇ.88.7 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದರೆ, ಶೇ.79.4 ಗಂಡುಮಕ್ಕಳು ಹಾಗೂ ಶೇ.83.3ರಷ್ಟು ಮಂದಿ ತೃತೀಯ ಲಿಂಗಿಗಳು ಉತ್ತೀರ್ಣತೆ ಸಾಧಿಸಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 12ನೇ ತರಗತಿಯ ಫಲಿತಾಂಶವು ಸಿಬಿಎಸ್ಇಯ ಅಧಿಕೃತ ವೆಬ್ಸೈಟ್ - cbse.nic.in ನಲ್ಲಿ ಲಭ್ಯವಿದ್ದು, ಫಲಿತಾಂಶವನ್ನು ನೋಡಬಹುದಾಗಿದೆ.