ಬೆಂಗಳೂರು, ಮೇ02(Daijiworld News/SS): ಪ್ರತಿಯೊಬ್ಬರೂ ಮೈತ್ರಿ ಧರ್ಮ ಪಾಲಿಸಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಧರ್ಮವನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ನಾವಂತೂ ಪಾಲನೆ ಮಾಡಿದ್ದೇವೆ. ಅವರೂ (ಜೆಡಿಎಸ್) ಪಾಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಕೆಲವೆಡೆ ಬಿಜೆಪಿಗೆ ಬಿದ್ದಿವೆ ಎಂಬ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆ ಶಿವಕುಮಾರ್, ನಾನು ಕಾಂಗ್ರೆಸ್ನ ವಕ್ತಾರನಲ್ಲ. ಕೇವಲ ಕಾರ್ಯಕರ್ತ ಹಾಗೂ ಸಚಿವ ಎಂದು ತಿಳಿಸಿದ್ದಾರೆ.
ನಾನು ಕೇವಲ ನನ್ನ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡಬಲ್ಲೆ. ಬೇರೆಯವರ ವಿಷಯಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದರು.
ಮಾತ್ರವಲ್ಲ, ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿಯವರ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕನಸು ಕಾಣುವವರಿಗೆ, ಕನಸಿನಲ್ಲಿ ಸಂತೋಷಪಡುತ್ತೇವೆ ಎನ್ನುವವರಿಗೆ ಬೇಡ ಅನ್ನಲು ಸಾಧ್ಯವೇ ಎಂದು ವ್ಯಂಗ್ಯ ಮಾಡಿದರು.