ರಾಯ್ ಬರೇಲಿ, ಮೇ 02 (Daijiworld News/MSP): ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿಗೆ ಲಾಭ ಒದಗಿಸುವುದಕ್ಕಿಂಥ ನಾನು ಸಾಯುವುದೇ ಮೇಲು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಬುಧವಾರ ಪ್ರಚಾರ ಮಾಡುತ್ತ, "ಎಲ್ಲೆಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಎಲ್ಲೆಲ್ಲಿ ಗೆಲ್ಲಲು ಸಾಧ್ಯವಿಲ್ಲವೋ, ಅಲ್ಲೆಲ್ಲಾ ಬಿಜೆಪಿಯ ಮತಗಳನ್ನು ನುಂಗಿ ಹಾಕಲೆಂದು ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ" ಎಂದು ಹೇಳಿಕೆ ನೀಡಿದ್ದರು. ಆದರೆ ಅವರ ಈ ಮಾತಿಗೆ ಮೈತ್ರಿಕೂಟ ಹಾಗೂ ಪಕ್ಷದಿಂದಲೇ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಾಧ್ಯಮದ ಮುಂದೆ ಮತ್ತೆ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಹೇಳಿದ್ದೇನೆಂದರೆ, ಕಾಂಗ್ರೆಸ್ ಈ ಚುನಾವಣೆಯಲ್ಲಿ ತನ್ನದೇ ಆದ ಸಾಮರ್ಥ್ಯದ ಮೇಲೆ ಹೋರಾಡುತ್ತಿದೆ. ನಾನು ದುರ್ಬಲ ಅಭ್ಯರ್ಥಿಗಳನ್ನು ಹಾಕಿ ಬಿಜೆಪಿಗೆ ಲಾಭ ಒದಗಿಸಿ ಕೊಡುವುದಕ್ಕಿಂತ ಹೆಚ್ಚಾಗಿ ಬೇಕಿದ್ದರೆ ನಾನು ಸಾಯುತ್ತೇನೆ. ಬಿಜೆಪಿಯ ಮತಗಳನ್ನು ಸೆಳೆಯಲು ನಮ್ಮ ಸಮರ್ಥ ಅಭ್ಯರ್ಥಿಗಳು ಬಿಜೆಪಿಗೆ ಬಲವಾಗಿ ಪೈಪೋಟಿ ನೀಡುತ್ತಿದ್ದಾರೆ ಎಂದಿದ್ದಾರೆ.
ಪ್ರಿಯಾಂಕ ಈ ಹೇಳಿಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ "ನನಗೆ ಪ್ರಿಯಾಂಕ ಮಾತುಗಳಲ್ಲಿ ಯಾವುದೇ ನಂಬಿಕೆಯಿಲ್ಲ. ಉತ್ತರ ಪ್ರದೇಶದಲ್ಲಿ ಎಲ್ಲೇ ಆಗಲಿ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.ಈ ರೀತಿಯ ಕೆಲಸ ಯಾವುದೇ ಪಕ್ಷವೂ ಮಾಡುವುದಿಲ್ಲ. ಆದರೆ, ಇಡೀ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ಹೀಗಾಗಿ ಏನೇನೋ ಸಬೂಬು ಹೇಳುತ್ತಿದ್ದಾರೆ " ಎಂದು ವಾಗ್ದಾಳಿ ನಡೆಸಿದ್ದರು.