ನವದೆಹಲಿ,ಮೇ2(DaijiworldNews/AZM): ರಂಜಾನ್ ತಿಂಗಳಲ್ಲಿ ಉಳಿದ ಮೂರು ಹಂತಗಳ ಲೋಕಸಭಾ ಚುನಾವಣೆ ನಡೆಯಲಿದ್ದು, ವೇಳಾಪಟ್ಟಿಯನ್ನು ಬದಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಮೇ 5ರ ಭಾನುವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದ್ದು , ಜೂ.5 ರವರೆಗೆ ನಡೆಯಲಿದೆ. ಅಲ್ಲದೆ ಕೆಲವು ರಾಜ್ಯಗಳಲ್ಲಿ ಬಿಸಿಲಿನ ತೀವ್ರ ದಗೆ ಮತ್ತೆ ಉಷ್ಣ ಹವೆಯಿಂದಾಗಿ ಮತದಾನಕ್ಕೆ ತೊಂದರೆಯಾಗಲಿದೆ. ಆದ ಕಾರಣ ಮತದಾನದ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಕೆಲವು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸಿ ಮತದಾನ ವೇಳಾ ಪಟ್ಟಿಯನ್ನು ಬದಲಿಸುವ ಬಗ್ಗೆ ಆಯೋಗ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದಲೇ ಮತದಾನ ಆರಂಭಿಸಬೇಕೆಂಬ ಬಗ್ಗೆ ಅರ್ಜಿಗಳಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಆಯೋಗ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿತ್ತು.
ಬೆಳಗ್ಗೆ 5 ಗಂಟೆಯಿಂದ ಸಂಜೆ 6.45 ಗಂಟೆಯವರೆಗೆ ರಂಜಾನ್ ಉಪವಾಸ ನಡೆಯಲಿದೆ. ಮುಸ್ಲಿಂ ಮತದಾರರು ತಮ್ಮ ಆಚರಣೆಗೆ ತೊಂದರೆಯಾಗದಂತೆ ಸೂಕ್ತ ಅವಧಿಯಲ್ಲಿ ಮತ ಚಲಾಯಿಸಲು ಅವಕಾಶ ನೀಡಬಹುದಾದ ಸಾಧ್ಯತೆ ಬಗ್ಗೆಯೂ ಆಯೋಗ ಪರಿಶೀಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.
ಲೋಕಸಭೆಗೆ ಮೇ 6 , ಮೇ 12 ಮತ್ತು ಮೇ 19ರಂದು ಉಳಿದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು , ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.