ದಾವಣಗೆರೆ,ಮೇ2(DaijiworldNews/AZM): ಗ್ರಾಹಕರು ಆನ್ ಲೈನ್ ಮೂಲಕ ದುಬಾರಿ ವಸ್ತುಗಳನ್ನು ಖರೀದಿಸುವ ಮುಂಚೆ ಸ್ವಲ್ಪ ಎಚ್ಚರವಹಿಸುವುದು ಒಳ್ಳೆದು. ಯಾಕೆಂದರೆ ಇಲ್ಲೊಬ್ಬರು ಆನ್ ಲೈನ್ ಜಾಹೀರಾತಿಗೆ ಮರುಳಾಗಿ 1,80,450 ರೂ. ಕಳೆದುಕೊಂಡಿದ್ದಾರೆ.
ನಗರದ ಆಂಜನೇಯ ಟ್ರೇಡರ್ಸ್ ಮಾಲಕ ಆಂಜನೇಯ ವಂಚನೆಗೊಳಗಾದ ವ್ಯಕ್ತಿ. ಕಳೆದ ಎ.26ರಂದು ಇವರು ತಮ್ಮ ಫೇಸ್ಬುಕ್ ಪೇಜ್ ಪರಿಶೀಲಿಸುತ್ತಿದ್ದಾಗ ಪ್ರಮುಖ ಆನ್ ಲೈನ್ ಮಾರಾಟದ ವೆಬ್ ಸೈಟ್ ಒಂದರ ಜಾಹೀರಾತಿನಲ್ಲಿ ಮಹೀಂದ್ರ ಬೊಲೆರೊ ಪವರ್ ಪ್ಲಸ್ ಝಡ್ಎಕ್ಸೆಎಲ್ ವಾಹನವು ಮಾರಾಟಕ್ಕಿರುವುದು ತಿಳಿದುಬಂದಿದೆ. ಖರೀದಿಸುವ ಆಸಕ್ತಿಯಿಂದ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ವಾಹನ ಮಾಲಕರು ತಮ್ಮನ್ನು ವಿಜಯ ಕುಮಾರ್ ಎಂಬುದಾಗಿ ಪರಿಚಯಿಸಿಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ತಮಗೆ ತುರ್ತಾಗಿ ಹಣದ ಅವಶ್ಯಕತೆ ಇರುವುದರಿಂದ ವಾಹನವನ್ನು 3.50 ಲಕ್ಷ ರೂ.ಗಳಿಗೆ ಮಾರುತ್ತಿರುವುದಾಗಿ ವಿಜಯ ಕುಮಾರ್ ತಿಳಿಸಿದ್ದಾನೆ. ಮಾತುಕತೆ ನಂತರ 3.20 ಲಕ್ಷ ರೂ.ಗಳಿಗೆ ವ್ಯವಹಾರ ಕುದುರಿದೆ. ಮುಂಗಡ ಹಣವೆಂದು ಹಂತ-ಹಂತವಾಗಿ ಒಟ್ಟು 1,80,450 ರೂ.ಗಳನ್ನು ವಿಜಯ ಕುಮಾರ್ ಹೇಳಿದ ಖಾತೆಗೆ ಜಮಾ ಮಾಡಿದ್ದಾರೆ. ತದನಂತರ ಸದರಿ ವ್ಯಕ್ತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲ, ವಾಹನವನ್ನೂ ನೀಡಿಲ್ಲ.
ವಂಚಕರಿಂದ ತಮಗೆ ಹಣ ವಾಪಾಸ್ ಕೊಡಿಸುವಂತೆ ಆಂಜನೇಯ ಇದೀಗ ಪೊಲೀಸರ ಮೊರೆ ಹೋಗಿದ್ದು, ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.