ನವದೆಹಲಿ,ಮೇ2(DaijiworldNews/AZM):ಒಡಿಶಾ ಕರಾವಳಿ ಪ್ರದೇಶಗಳಿಗೆ ಶುಕ್ರವಾರ ಸಂಜೆಯ ವೇಳೆಗೆ ಫಾನಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಗಳು ಕಾಣುತ್ತಿದ್ದು, ಈ ಹಿನ್ನಲೆ ಕರಾವಳಿ ಭಾಗದ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಫಾನಿ ಚಂಡಮಾರುತ 170-180 ಕಿ.ಮೀ. ವೇಗದಲ್ಲಿ ಪುರಿ ಕಡೆಗೆ ಚಲಿಸುತ್ತಿದೆ. ಒಡಿಶಾ ಕರಾವಳಿಯಲ್ಲಿ ಸುಮಾರು 24 ಗಂಟೆ ಬಿರುಗಾಳಿ ಮತ್ತು ಭಾರಿ ಮಳೆ ಬೀಳಲಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯೂ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದು, ರಾಜ್ಯಾದ್ಯಂತ 879 ಸೈಕ್ಲೋನ್ ಶೆಲ್ಟರ್ಗಳನ್ನು ಸಿದ್ಧಗೊಳಿಸಲಾಗಿದೆ. ಇದರಲ್ಲಿ 10 ಲಕ್ಷ ಜನರಿಗೆ ಆಶ್ರಯ ನೀಡಬಹುದಾಗಿದೆ. ಕರಾವಳಿ ಮತ್ತು ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಜಿಲ್ಲೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗುರುವಾರ ಸಂಜೆಯ ವೇಳೆಗೆ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಾನಿ ಚಂಡಮಾರುತ ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯೊಳಗೆ ತೀರ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು. ನಾಳೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯ ವಕ್ತಾರ ಸಂಗಮ್ ಮಹೋಪಾತ್ರ ಮಾಹಿತಿ ನೀಡಿದ್ದಾರೆ.