ನವದೆಹಲಿ, ಮೇ 02(DaijiworldNews/AZM):ಮಕ್ಕಳು ಪ್ರಿಯಾಂಕಾ ಗಾಂಧಿ ಮುಂದೆ 'ಚೌಕೀಧಾರ್ ಚೋರ್ ಹೇ' ಘೋಷಣೆ ಕೂಗಿದ ವಿಡಿಯೋ ವೈರಲ್ ಆದ ಬಳಿಕ ಪ್ರಿಯಾಂಕಾ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ ನೊಟೀಸ್ ಜಾರಿ ಮಾಡಿದೆ.
ಪ್ರಿಯಾಂಕಾ ಗಾಂಧಿ ಅವರು ಅಮೇಥಿಯಲ್ಲಿ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಅಲ್ಲಿನ ಮಕ್ಕಳು ಪ್ರಿಯಾಂಕಾ ಗಾಂಧಿ ಎದುರು 'ಚೌಕೀಧಾರ್ ಚೋರ್ ಹೇ' ಘೋಷಣೆಗಳನ್ನು ಕೂಗಿದ್ದಾರೆ, ಆ ನಂತರ ಕೆಟ್ಟ ಪದವನ್ನೂ ಬಳಸಿದ್ದರು ಆದರೆ ಈ ವೇಳೆ ಪ್ರಿಯಾಂಕಾ ಗಾಂಧಿ ಮತ್ತು ಕೆಲವು ಮುಖಂಡರು ಮಕ್ಕಳನ್ನು ತಡೆದಿರುವ ಪ್ರಸಂಗವು ಉಂಟಾಗಿತ್ತು.
ತದನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಗುಮಾನಿಯಿಂದ ಈಗ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಪ್ರಿಯಾಂಕಾ ಗಾಂಧಿ ಅವರಿಗೆ ನೊಟೀಸ್ ನೀಡಿದ್ದು, ಪ್ರಚಾರ ನಡೆದ ಸ್ಥಳ, ಆ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೋರಿದೆ.
ಮಕ್ಕಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಂದದ್ದು ಹೇಗೆ, ಅವರನ್ನು ಬಲವಂತದಿಂದ ಕರೆತರಲಾಗಿದೆಯೇ ಎಂಬಿತ್ಯಾದಿ ಮಾಹಿತಿ ಬಗ್ಗೆ ಮೂರು ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಆಯೋಗವು ಹೇಳಿದೆ.