ಬೆಂಗಳೂರು, ಮೇ 02(DaijiworldNews/AZM): ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಉಳಿಯುವುದಿಲ್ಲ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಮಾಧ್ಯಮದವರೊಂದಿಗೆ ಮಾತನಾಡಿ ಮತ್ತೇ ಅದೇ ರಾಗ ಹಾಡಿದ್ದಾರೆ. ಅಲ್ಲದೆ ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದ್ದಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ವೈ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರಿಗೆ ಸೋಲು ಕಟ್ಟಿಟ್ಟ ಬುತ್ತಿ. ಜನತೆ ಈ ಮೂವರನ್ನೂ ಸಾರಾ ಸಗಟಾಗಿ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಏನೇ ತಂತ್ರ-ಕುತಂತ್ರ ಮಾಡಿದರೂ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲು ಸಾಧ್ಯವೇ ಇಲ್ಲ. ಇದರ ಸುಳಿವರಿತೇ ಮುಖ್ಯಮಂತ್ರಿ ಕುಮಾರಸ್ವಾಮಿ ರೆಸಾರ್ಟ್ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. 23ರ ಫಲಿತಾಂಶದ ನಂತರ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ತಮ್ಮ ಆಪ್ತರ ಜತೆ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಯಾವ ಕಾರಣಕ್ಕೂ ಫಲಿತಾಂಶದ ಬಳಿಕ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಗೆಲ್ಲುವುದರಲ್ಲಿ ಯಾವ ಸಂಶಯವೂ ಬೇಡ. ಅಲ್ಲಿ ಹಣಬಲ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಜೆಡಿಎಸ್ ಗೆಲ್ಲಲು ಮುಂದಾಗಿತ್ತು. ಆದರೆ, ಮಂಡ್ಯದ ಸ್ವಾಭಿಮಾನಿ ಜನ ಸುಮಲತಾ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.