ನವದೆಹಲಿ,ಮೇ02(DaijiworldNews/AZM): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು 'ಕೊಲೆ ಆರೋಪಿ' ಎಂದು ಪ್ರಸ್ತಾಪಿಸಿದ್ದ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ರಾಹುಲ್ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಕಳೆದ ತಿಂಗಳು ಏಪ್ರಿಲ್ 23ರಂದು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ಅಮಿತ್ ಶಾ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿ. ಜೈ ಶಾ ಎಂಬ ಹೆಸರು ಕೇಳಿದ್ದೀರಾ? ಅವರೇ 50 ಸಾವಿರವನ್ನು 80 ಕೋಟಿಯನ್ನಾಗಿ ಪರಿವರ್ತಿಸಿದವರು. ಶಾ ಒಬ್ಬ ಜಾದೂಗಾರ" ಎಂದು ರಾಹುಲ್ ವ್ಯಂಗ್ಯವಾಡಿದ್ದರು.
ರಾಹುಲ್ ಅಮಿತ್ ಶಾ ಅವರನ್ನು ಕೊಲೆ ಪ್ರಕರಣದ ಆರೋಪಿ ಎಂಬುದನ್ನು ಪ್ರಶ್ನಿಸಿ ಆಯೋಗಕ್ಕೆ ದೂರು ನೀಡಲಾಗಿತ್ತು. ಸದ್ಯ ಈ ಪ್ರಕರಣ ವಿಚಾರಣೆ ನಡೆಸಿದ ಆಯೋಗ ರಾಹುಲ್ ಯಾವುದೇ ರೀತಿ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈ ಹಿಂದೆ 2015 ಜನವರಿಯಲ್ಲಿಯೇ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಅಮಿತ್ ಶಾ ಆರೋಪಿ ಎಂದು ರಾಹುಲ್ ಪ್ರಚಾರದ ವೇಳೆ ಪ್ರಸ್ತಾಪಿಸಿದ್ದರು ಎಂದು ಕೃಷ್ಣವದನ್ ಬ್ರಹ್ಮಭಟ್ ಎಂಬುವವರು ಆಯೋಗಕ್ಕೆ ದೂರು ನೀಡಿದ್ದರು.