ನವದೆಹಲಿ, ಮೇ03(Daijiworld News/SS): ಓಡಿಶಾದ ಪುರಿಯ ದಕ್ಷಿಣ ಭಾಗದಲ್ಲಿ ತೀವ್ರ ಸ್ವರೂಪ ಪಡೆದಿರುವ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಪರಿಣಾಮ 10 ಸಾವಿರ ಗ್ರಾಮಗಳು ಮತ್ತು 52 ಪಟ್ಟಣಗಳಿಗೆ ತೊಂದರೆಯಾಗಬಹುದು ಎಂದು ಹೇಳಲಾಗುತ್ತಿದೆ.
ಈಗಾಗಲೆ 11.5 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಇವರ ಪೈಕಿ 8 ಲಕ್ಷ ಜನರನ್ನು ಈಗಾಗಲೆ ಸ್ಥಳಾಂತರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕೋಲ್ಕತ ವಿಮಾನ ನಿಲ್ದಾಣದಲ್ಲಿ ಕೂಡ ವಿಮಾನಗಳ ಸಂಚಾರ ಶುಕ್ರವಾರ ಬೆಳಗ್ಗೆಯಿಂದ ರದ್ದುಗೊಳ್ಳಲಿದೆ. ಪರಿಸ್ಥಿತಿ ಸುಧಾರಣೆಯಾದಂತೆ ವಿಮಾನ ಸಂಚಾರವನ್ನು ಆರಂಭಿಸುವ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಡಿಶಾದ 8 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುರಿ ದಕ್ಷಿಣ ನೈಋತ್ಯ ಭಾಗದಿಂದ 385 ಕಿಮೀ ದೂರದಲ್ಲಿ ಮತ್ತು ವಿಶಾಖಪಟ್ಟಣದ ದಕ್ಷಿಣ ಆಗ್ನೇಯ ಭಾಗದಿಂದ 200 ಕಿಮೀ ದೂರದಲ್ಲಿ ಚಂಡಮಾರುತವಿದ್ದು, ಶುಕ್ರವಾರ ಪುರಿಯ ಕರಾವಳಿ ಭಾಗವಾದ ಗೋಪಾಲಪುರ ಮತ್ತು ಚಾಂದ್ಬಲಿ ಮೇಲೆ 175-205 ಕಿಮೀ ವೇಗದಲ್ಲಿ ಬಂದು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ 19 ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮೇ 1ರಿಂದ ಮೇ 5ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಫನಿ ಚಂಡಮಾರುತದಿಂದ 10 ಸಾವಿರ ಗ್ರಾಮಗಳು ಮತ್ತು 52 ಪಟ್ಟಣಗಳು ತೊಂದರೆಗೀಡಾಗುವ ಸಾಧ್ಯತೆ ಇರುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ (ಎನ್ಸಿಎಂಸಿ) ಮಾಹಿತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಎನ್ಸಿಎಂಸಿಗೆ ಮನವಿ ಮಾಡಿಕೊಂಡಿರುವುದಾಗಿ ಒಡಿಶಾದ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ತಿಳಿಸಿದ್ದಾರೆ.
ಈಗಾಗಲೆ 900 ಶಿಬಿರಗಳನ್ನು ತೆರೆಯಲಾಗಿದ್ದು, ಅಲ್ಲಿಗೆ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಗಂಜಾಂ, ಗಜಪತಿ, ಪುರಿ, ಖುರ್ದಾ, ಜಗತ್ಸಿಂಗ್ಪುರ, ಕೇಂದ್ರಪಾರಾ, ಭದ್ರಕ್, ಜಜ್ಪುರ್ ಮತ್ತು ಬಲ್ಸೋರ್, ಪಶ್ಚಿಮ ಬಂಗಾಳದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ದಕ್ಷಿಣ ಮತ್ತು ಉತ್ತರ 24 ಪರಾಗಣ, ಹೌರಾ, ಹೂಗ್ಲಿ, ಜಾರ್ಗಾಮ್ ಅಲ್ಲದೆ ಕೋಲ್ಕತ ನಗರ ಕೂಡ ಹಾನಿಗೊಳಗಾಗಬಹುದು ಎಂದು ಹೇಳಿದ್ದಾರೆ.