ನವದೆಹಲಿ, ಮೇ03(Daijiworld News/SS): ಈ ಹಿಂದೆ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರರ ವಿರುದ್ಧ ಒಟ್ಟು 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೇನಾ ಕಾರ್ಯಾಚರಣೆಯನ್ನು ನಾವು ಯಾವತ್ತೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರರ ವಿರುದ್ಧ ಒಟ್ಟು 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ ನಡೆಸಿದ ಸರ್ಜಿಕಲ್ ದಾಳಿಯ ಪಟ್ಟಿ ಬಿಡುಗಡೆ ಮಾಡಿದ ಅವರು, 2008ರ ಜೂನ್ 19 ರಂದು ಭತ್ತಲ್ ಸೆಕ್ಟರ್ನಲ್ಲಿ ಸರ್ಜಿಕಲ್ ಸ್ಟ್ರೈಕ್, 2011ರ ಆಗಸ್ಟ್ 30, ಸೆಪ್ಟಂಬರ್ 1 ರಂದು ಶಾರ್ದಾ ಸೆಕ್ಟರ್ ಮೇಲೆ ದಾಳಿ, 2013ರ ಜ.6 ರಂದು ಸಾವನ್ ಪಾತ್ರಾ ಚೆಕ್ಪೋಸ್ಟ್ನಲ್ಲಿ ಸರ್ಜಿಕಲ್ ಸ್ಟ್ರೈಕ್, 2013ರ ಜುಲೈ 27-28 ರಂದು ನಜಾಪಿರ್ ಸೆಕ್ಟರ್ನಲ್ಲಿ ಸರ್ಜಿಕಲ್ ಸ್ಟ್ರೈಕ್. 2013ರ ಆಗಸ್ಟ್ 6ರಂದು ನೀಲಂ ಕಣಿವೆಯಲ್ಲಿ ಸರ್ಜಿಕಲ್ ಸ್ಟ್ರೈಕ್, 2014ರ ಜನವರಿ 14 ರಂದು UPA ಅವಧಿಯ 6ನೇ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್, ಯುಪಿಎ ಅವಧಿಯಲ್ಲಿ ಆರು ಸರ್ಜಿಕಲ್ ದಾಳಿ ನಡೆದಿದೆ. ಅಲ್ಲದೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಎರಡು ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿದ ಅವರು, ದೇಶದ ಭದ್ರತೆ ಮತ್ತು ಸೈನಿಕರ ಗೌರವ ಕಾಪಾಡುವುದು ಹೇಗೆಂದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿದೆ ಎಂದು ತಿಳಿಸಿದ್ದಾರೆ.