ಭುವನೇಶ್ವರ, ಮೇ03(Daijiworld News/SS): ಉಗ್ರ ಸ್ವರೂಪದ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಇದರ ವೇಗಕ್ಕೆ ಪುರಿ ಕಡಲ ತೀರದಲ್ಲಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ.
ಫೋನಿ ಚಂಡಮಾರುತ ಗಂಟೆಗೆ 200 ಕಿ.ಮೀ ವೇಗದಲ್ಲಿ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಭೂ ಕುಸಿತವಾಗಿದೆ. ವಿದ್ಯುತ್ ಕೂಡ ಸ್ಥಗಿತವಾಗಿದೆ.
ಚಂಡಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಭಾರಿ ಪ್ರಮಾಣದ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಫೋನಿ ಚಂಡಮಾರುತ ಮಧ್ಯಾಹ್ನದ ಹೊತ್ತಿಗೆ ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪರಿಣಾಮ, ರಾಜ್ಯದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಎನ್ಡಿಆರ್ಎಫ್ ತಂಡಗಳು ಸರ್ವ ಸನ್ನದ್ಧವಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.