ನವದೆಹಲಿ, ಮೇ03(Daijiworld News/SS): ಉಗ್ರ ಸ್ವರೂಪದ ಚಂಡಮಾರುತದ ಈ ಗಾಗಲೇ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ಭೀಕರ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿರುವ ಒಡಿಶಾ, ಪಶ್ಚಿಮ ಬಂಗಾಲ ಕರಾವಳಿಯ ಜನರ ಅನುಕೂಲಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 1938 ಸಹಾಯವಾಣಿ ಸಂಖ್ಯೆಗೆ ಚಾಲನೆ ನೀಡಿದೆ.
ಫೋನಿ ಚಂಡಮಾರುತದ ಬಗ್ಗೆ ಅಪ್ಡೇಟ್ಸ್ ಹಾಗೂ ನೆರವು ಪಡೆಯಲು ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, 1938 ಈ ಸಂಖ್ಯೆ ಬಳಸಿ, ಮಾಹಿತಿ ಪಡೆಯಬಹುದು. 1938ಕ್ಕೆ ಕರೆ ಮಾಡಿ ತೊಂದರೆಗಳನ್ನು ಹೇಳಿಕೊಳ್ಳಬಹುದಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇದುವರೆಗೂ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಒಡಿಶಾದ ಪಾಲಿಗೆ ಎರಡು ದಶಕದಲ್ಲಿಯೇ ಅತ್ಯಂತ ಪ್ರಬಲ ಚಂಡಮಾರುತ ಎನಿಸಿಕೊಳ್ಳಲಿರುವ ಫೊನಿ ಅಬ್ಬರದಿಂದ ಜೀವಹಾನಿ ತಪ್ಪಿಸಲು ಕೈಗೊಂಡಿರುವ ಬಹುದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ. ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಲ ಭಾಗಗಳಲ್ಲಿ ಸಂಚರಿಸುತ್ತಿದ್ದ 170ಕ್ಕೂ ಅಧಿಕ ರೈಲುಗಳ ಓಡಾಟ ಮತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಮಧ್ಯಾಹ್ನದ ಹೊತ್ತಿಗೆ ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ಶರವೇಗದಲ್ಲಿ ನಡೆಯುತ್ತಿದೆ.
ಸಂತ್ರಸ್ತರಿಗೆ ನೆರವಾಗಲು ಭಾರತೀಯ ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿ ಆರ್ ಎಫ್) ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಎನ್ ಡಿಆರ್ ಎಫ್ ನ ಮುಖ್ಯಸ್ಥ ಎಸ್ಎನ್ ಪ್ರಧಾನ್ ಅವರು ಹೇಳಿದ್ದಾರೆ.