ನವದೆಹಲಿ, ಮೇ03(Daijiworld News/SS): ‘ಫೋನಿ’ ಚಂಡಮಾರುತ ಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಿದ್ದು, ಐವರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರೈಲು ಸಂಚಾರ ಮತ್ತು ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬಿರುಗಾಳಿಗೆ ಮರಗಳು ಧರೆಗುರುಳಿರುವ ಪರಿಣಾಮ, ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರ ತೀರದಲ್ಲಿರುವ 15 ಜಿಲ್ಲೆಗಳ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೇ ಒಬ್ಬೊಬ್ಬರ ಕೈಯನ್ನು ಹಿಡಿದುಕೊಂಡು ತಮ್ಮ ಮನೆಗೆ ಸೇರಿಕೊಳ್ಳುತ್ತಿದ್ದಾರೆ. ಧಾರಾಕಾರ ಮಳೆಯಾಗುತ್ತಿದ್ದು, ಕಬ್ಬಿಣದ ವಸ್ತುಗಳು, ಮರಗಳು ಸುಲಭವಾಗಿ ತೇಲಿಕೊಂಡು ಹೋಗುತ್ತಿದೆ ಎಂದು ತಿಳಿದುಬಂದಿದೆ.
ಫೊನಿ ಚಂಡಮಾರುತವು ದಕ್ಷಿಣದ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತಿದೆ. ಗಂಟೆಗೆ 240 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವ ಈ ಪ್ರಚಂಡ ಮಾರುತದಿಂದಾಗಿ ಭಾರಿ ಮಳೆಯೂ ಆಗುತ್ತಿದೆ. 43 ವರ್ಷಗಳ ಬಳಿಕ ಇಷ್ಟು ಭೀಕರ ಮಾರುತ ಬೀಸುತ್ತಿದೆ ಎನ್ನುತ್ತಿದ್ದಾರೆ ತಜ್ಞರು. ಒಡಿಶಾ, ಆಂಧ್ರ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು ತೀರಗಳಲ್ಲಿಯೂ ಫೊನಿ ಚಂಡಮಾರುತ ಪರಿಣಾಮ ಬೀರುತ್ತಿದೆ. ಕಟ್ಟಡಗಳ ಚಾವಣಿಗಳು ಹಾರಿ ಹೋಗುತ್ತಿವೆ, ಮರಗಳು ಧರಾಶಾಯಿಯಾಗುತ್ತಿವೆ.