ಭುವನೇಶ್ವರ,ಮೇ 03 (Daijiworld News/MSP): ಒಡಿಸ್ಸಾದ ಧಾರ್ಮಿಕ ಪ್ರದೇಶವಾದ ’ಪುರಿ’ ಗೆ ‘ಫೋನಿ’ ಚಂಡಮಾರುತ ಅಪ್ಪಳಿಸಿದ್ದು ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಈಗಾಗಲೇ ಫೋನಿಯ ಆರ್ಭಟಕ್ಕೆ ಐವರು ಬಲಿಯಾಗಿದ್ದಾರೆ. ಮಾತ್ರವಲ್ಲದೆ ಚಂಡಮಾರುತದ ಪರಿಣಾಮ ಪುರಿಯಲ್ಲಿ ಭೂಕುಸಿತ ಸಂಭವಿಸಿದೆ. 43 ವರ್ಷಗಳ ಬಳಿಕ ಭೀಕರ ಚಂಡಮಾರುತ ಇದಾಗಿದ್ದು, ಈಗಾಗಲೇ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಇನ್ನು ಹಲವೆಡೆ ಭೂ ಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆಯನ್ನು ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದಾಗಿದ್ದಾರೆ. ಸಧ್ಯದ ಮಾಹಿತಿಯ ಪ್ರಕಾರ ಗಂಟೆಗೆ 180 ಕಿ.ಮೀಟರ್ ವೇಗದಲ್ಲಿ ಭಾರಿ ಗಾಳಿ ಬೀಸುತ್ತಿರುವುದರಿಂದ ಒಡಿಸ್ಸಾದ ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಚಂಡಮಾರುತ ಅಪಾಯ ಎದುರಾಗಿರುವ ಪ್ರದೇಶಗಳಲ್ಲಿನ 11.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 83 ಪ್ಯಾಸೆಂಜರ್ ರೈಲುಗಳು ಸೇರಿ ಒಟ್ಟು 143 ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ಒಡಿಸ್ಸಾ ಜನಜೀವನ ಸಂಪೂರ್ಣ ಸ್ತಬ್ದವಾಗಿದೆ, ಜನರಿಗೆ ಆಹಾರ ಒದಗಿಸಲು 5000 ಅಡುಗೆ ಮನೆಯನ್ನು ತೆರೆಯಲಾಗಿದೆ ಎಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.