ನವದೆಹಲಿ, ಮೇ03(Daijiworld News/SS): ಫೋನಿ ಚಂಡಮಾರುತಕ್ಕೆ ಸಿಲುಕಿರುವ ರಾಜ್ಯಗಳ ಸಂಪರ್ಕದಲ್ಲಿ ಕೇಂದ್ರ ಸರ್ಕಾರವಿದೆ. ಇಡೀ ದೇಶವೇ ನಿಮ್ಮೊಂದಿಗೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಹಿಂದೂನ್ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ತಿಳಿಸಿದ್ದಾರೆ.
ಒಡಿಶಾದ ಕರಾವಳಿ ಭಾಗಕ್ಕೆ ಬಂದು ಅಪ್ಪಳಿಸಿದ ಫೊನಿ ಮಾರುತ ಭಾರಿ ಬಿರುಗಾಳಿ ಸಹಿತ ಮಳೆಯೊಂದಿಗೆ ತನ್ನ ರೌದ್ರ ನರ್ತನವನ್ನು ಮುಂದುವರಿಸುತ್ತಲೇ ಇದೆ. ಗಂಟೆಗೆ ಸುಮಾರು 175 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತ್ತಕ್ಕೆ ಅಕ್ಷರಶಃ ಒಡಿಶಾ ತತ್ತರಿಸಿ ಹೋಗಿದೆ.
ಫೊನಿಯ ಅಬ್ಬರಕ್ಕೆ ಸಿಲುಕಿ ಒಡಿಶಾದ ಹಲವೆಡೆ ಮರಗಳು ಧರೆಗುರುಳಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ, ರೈಲು, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಕೆಲವೆಡೆ ದೂರವಾಣಿ ಸಂಪರ್ಕವೂ ಸ್ಥಗಿತಗೊಂಡಿದೆ. ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಇದುವರೆಗೂ 5 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಮೊದಲೇ ಈ ಉಗ್ರ ಚಂಡಮಾರುತದ ಬಗ್ಗೆ ಮಾಹಿತಿ ತಿಳಿದಿದ್ದರಿಂದ ಜನರನ್ನು ಬೇರೆಡೆ ಸ್ಥಳಾಂತರಿಸುವುದರಿಂದ ಅಪಾರ ಪ್ರಾಣ ಹಾನಿಯಾಗಿಲ್ಲ. ಆದರೆ, ಸಾಕಷ್ಟು ಆಸ್ತಿ ನಷ್ಟ ಉಂಟಾಗಿದೆ. ರಕ್ಷಣಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದೆ.