ನವದೆಹಲಿ, ಮೇ03(Daijiworld News/SS): ಫೋನಿ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಇದರ ವೇಗಕ್ಕೆ ಪುರಿ ಕಡಲ ತೀರದಲ್ಲಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸೇವೆ ಸ್ಥಗಿತವಾಗಿದೆ. ಮಾತ್ರವಲ್ಲ, ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಸಾವು-ನೋವು ಸಂಭವಿಸಿದೆ.
ಬರೊಬ್ಬರಿ ಪ್ರತೀ ಗಂಟೆಗೆ 200 ಕಿ.ಮೀ ವೇಗದಲ್ಲಿ ಫೋನಿ ಚಂಡಮಾರುತ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಅಲ್ಲಲ್ಲಿ ಭೂ ಕುಸಿತವಾದ ವರದಿಯಾಗಿದೆ. ಚಂಡ ಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಮುಂಜಾನೆಯಿಂದಲೇ ಭಾರಿ ಪ್ರಮಾಣದ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದೆ. ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೊನಿ ಅಬ್ಬರ ಕಂಡು ಚುನಾವಣಾ ಸಮಾವೇಶವನ್ನು ರದ್ದುಪಡಿಸಿದ್ದಾರೆ. ಫೊನಿ ಮಾರುತ ಪಶ್ಚಿಮ ಬಂಗಾಳದ ಮೇಲೂ ಪ್ರಭಾವ ಬೀರಬಹುದೆಂಬುದನ್ನು ಅರಿತು ಮುಂದಿನ 48 ಗಂಟೆವರೆಗೆ ಯಾವುದೇ ಸಮಾವೇಶ ನಡೆಸದಿರಲು ನಿರ್ಧಾರ ಕೈಗೊಂಡಿದ್ದಾರೆ.
ಬಂಗಾಳದ ಕರಾವಳಿ ತೀರ ಪ್ರದೇಶದ ಬಳಿಯಿರುವ ಖರಗ್ಪುರನಲ್ಲಿ ಮಮತಾ ಬ್ಯಾನರ್ಜಿ ಉಳಿದುಕೊಂಡಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮಾತ್ರವಲ್ಲ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ ಜಾರ್ಖಂಡ್ನಲ್ಲಿ ಇಂದು ನಡೆಯಬೇಕಿದ್ದ ಮೂರು ಸಮಾವೇಶಗಳನ್ನು ರದ್ದುಪಡಿಸಿದ್ದಾರೆ. ಫೊನಿ ಚಂಡಮಾರುತ ಪ್ರಭಾವದಿಂದ ಜಾರ್ಖಂಡ್ ರಾಜ್ಯದಲ್ಲಿ ಹವಾಮಾನ ಪರಿಸ್ಥಿತಿ ಹದಗೆಟ್ಟಿರುವುದರಿಂದ ಸಮಾವೇಶ ರದ್ದಾಗಿದೆ ಎಂದು ತಿಳಿದುಬಂದಿದೆ.
ಫೋನಿ ಅಪಾರ ಮನೆಗಳು ಹಾನಿಯಾಗಿದ್ದು, ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.