ಬಿಹಾರ, ಮೇ 03 (Daijiworld News/MSP): ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಜಾನುವಾರು ಕಳ್ಳ ಎಂಬ ಅನುಮಾನದ ಮೇಲೆ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ್ನು ಜನಸಮೂಹವು ಥಳಿಸಿ ಕೊಂದ ಘಟನೆ ವರದಿಯಾಗಿದೆ.
ರಾಜ್ಯದ ರಾಜಧಾನಿ ಪಾಟ್ನಾದಿಂದ 300 ಕಿ.ಮೀ ದೂರದಲ್ಲಿರುವ ದಕ್ ಹರಿಪುರ್ ಗ್ರಾಮದ ಫೋರ್ ಬೆಸ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಗ್ರಾಮದವರಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ವ್ಯಕ್ತಿಯನ್ನು ಮಹೇಶ್ ಯಾದವ್ ಎಂದು ಗುರುತಿಸಲಾಗಿದೆ. ಮಹೇಶ್ ಮತ್ತು ಇನ್ನಿಬ್ಬರು ಹಸುಗಳನ್ನು ಕಳವು ಮಾಡಲು ಹೋದಾಗ ಸಿಕ್ಕಿಬಿದ್ದರು ಎನ್ನಲಾಗಿದೆ. ಈ ಜಿಲ್ಲೆಯಲ್ಲಿ ಐದು ತಿಂಗಳೊಳಗೆ ನಡೆದ ಎರಡನೇ ಘಟನೆ ಇದಾಗಿದೆ.
ಗ್ರಾಮಸ್ಥರೆಲ್ಲರೂ ಮಹೇಶ್ ನನ್ನು ಥಳಿಸುತ್ತಿದ್ದಾಗ ಪೊಲೀಸರು ಮದ್ಯಪ್ರವೇಶಿಸಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು ಆದರೆ ಆತ ದಾರಿ ಮದ್ಯೆ ಮೃತಪಟ್ಟಿದ್ದಾರೆ ಪೊಲೀಸ್ ಅಧಿಕಾರಿ ಶಿವ್ ಶರಣ್ ಸಾಹ್ ಹೇಳಿದ್ದಾರೆ.
ಮಹೇಶ್ ಸ್ಥಳೀಯ ಅಚ್ರಾ ಗ್ರಾಮದವರಾಗಿದ್ದು ಈ ಹಿಂದೆ ಜಾನುವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಅತನ ವಿರುದ್ದ ಫುಲ್ಕಾಹಾ ಠಾಣೆಯಲ್ಲಿ ಅಪರಾಧ ಪ್ರಕರಣವೂ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.