ಬೆಂಗಳೂರು, ಮೇ 03 (Daijiworld News/MSP): ಮೈತ್ರಿ ಧರ್ಮ ಪಾಲಿಸದ ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿಗರ ವಿರುದ್ದ ಶಿಸ್ತುಕ್ರಮಕ್ಕೆ ಒತ್ತಾಯಿಸಲು ಡಿನ್ನರ್ ವಿಡಿಯೋ ಪ್ರಕರಣವನ್ನು ಜೆಡಿಎಸ್ ಬಳಕೆ ಮಾಡಿದ್ದು, ಎಐಸಿಸಿ ವರಿಷ್ಟರಿಗೆ ದೂರು ಸಲ್ಲಿಸಿದೆ.
ಸುಮಲತಾ ಜೊತೆ ಮಂಡ್ಯ ಪರಾಜಿತ ಅಭ್ಯರ್ಥಿಗಳು ಡಿನ್ನರ್ ಪಾರ್ಟಿ ವಿಚಾರವಾಗಿ ಗರಂ ಆಗಿರುವ ಸಿಎಂ ಕುಮಾರಸ್ವಾಮಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹಮ್ಮದ್, ಖಾಸಗಿಯಾಗಿ ಸ್ನೇಹಿತರೆಲ್ಲರೂ ಸೇರಿಕೊಂಡು ಊಟಕ್ಕೆ ಹೋಗುವುದು ತಪ್ಪಲ್ಲ, ಸ್ನೇಹಿತರ ಆಹ್ವಾನದ ಮೇರೆಗೆ ಊಟಕ್ಕೆ ಕರೆದಾಗ ಅವರೆಲ್ಲರೂ ಹೋಗಿದ್ದಾರೆ. ಇಂತಹ ವಿಚಾರಕ್ಕೆ ಸಿಎಂ ಬೇಸರ ಮಾಡಿಕೊಂಡರೆ ನಾವೇನು ಮಾಡಲು ಆಗುತ್ತೆ ಹೇಳಿ..? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮಂಡ್ಯ ಲೋಕ ಉಪಚುನಾವಣೆ ನಡೆದಾಗ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಎಲ್ಲರೊಂದಿಗೆ ಖುದ್ದಾಗಿ ಮಾತನಾಡಿದ್ದರು. ಆದರೆ ಈ ಬಾರಿ ಕುಮಾರಸ್ವಾಮಿಯವರು ತಮ್ಮ ಹಳೆಯ ಕಾರ್ಯತಂತ್ರ ಅನುಸರಿಸಲಿಲ್ಲ. ಹೀಗಾಗಿ ಚಲುವರಾಯಸ್ವಾಮಿ ಮತ್ತವರ ಬಣ ಸಹಜವಾಗಿಯೇ ಅಸಮಾಧಾನಗೊಂಡಿದೆ ಎಂದು ಹೇಳಿದರು.
ಈ ವಿಚಾರವನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡು ಗೊಂದಲ ಮಾಡುತ್ತಿದ್ದಾರೆ ಎಂದರು. ಇನ್ನು ಊಟಕ್ಕೆ ಸೇರಿದ್ದ ದೃಶ್ಯಾವಳಿಗಳ ವಿಡಿಯೋ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಎಲ್ಲರ ಕೈಯಲ್ಲೂ ಮೊಬೈಲ್ಗಳಿವೆ. ಯಾರು ಬೇಕಾದ್ರು ವಿಡಿಯೋ ಮಾಡಬಹುದು. ಕ್ಷಣಾರ್ಧದಲ್ಲಿ ವಾಟ್ಸಪ್ನಲ್ಲೋ ಇನ್ನೊಂದರ ಮೂಲಕವೋ ಕಳಿಸಬಹುದು ಅಂತಾ ಜಮೀರ್ ಅಹಮ್ಮದ್ ಚಲುವರಾಯಸ್ವಾಮಿ ಅಂಡ್ ಟೀಂ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.