ನವದೆಹಲಿ, ಮೇ 03 (Daijiworld News/SM): ಆರಂಭದಿಂದಲೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಪ್ರಮುಖರಲ್ಲಿ ಬಾಬಾ ರಾಮ್ ದೇವ್ ಒಬ್ಬರು. ಆದರೆ, ನೋಟ್ ಬ್ಯಾನ್ ಸಂದರ್ಭದಲ್ಲಿ ಪ್ರಧಾನಿಯವರನ್ನು ಬಾಬಾ ರಾಮ್ ದೇವ್ ಟೀಕಿಸಿದ್ದರು. ಆದರೆ, ಇಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಮೋದಿಯವರನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿ ಸಂದರ್ಭದಲ್ಲೂ ಮೋದಿ ಪರವಾಗಿ ಮಾತನಾಡುವ ಬಾಬಾ ರಾಮ್ ದೇವ್ ಅವರು, ಪ್ರಧಾನಿಯವರ ಒಂದು ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು ಮೋದಿ ಅವರ ಅಪನಗದೀಕರಣ ನಿರ್ಧಾರವನ್ನು ಟೀಕಿಸಿದ್ದರು. ಪ್ರಧಾನಿ ಅವರನ್ನು ಭ್ರಷ್ಟ ಬ್ಯಾಂಕರ್ಗಳು ತಪ್ಪು ದಾರಿಗೆ ಎಳೆದಿದ್ದರು. ಆರ್ಥಿಕತೆಯಲ್ಲಿ ಅಪನಗದೀಕರಣವು 3ರಿಂದ 5 ಲಕ್ಷ ಕೋಟಿ ರೂಪಾಯಿ ಹಗರಣವನ್ನು ಹೊರಗೆಳೆಯುತ್ತದೆ ಎಂದು ಹೇಳಲಾಗಿತ್ತು.
ಆದರೆ, ಅಪನಗದೀಕರಣದಿಂದಾಗಿ ಬ್ಯಾಂಕರ್ಗಳು ಕೋಟ್ಯಾಂತರ ರೂಪಾಯಿ ಹಣ ಮಾಡಿದರು. ಅವರಲ್ಲಿನ ಭ್ರಷ್ಟಾಚಾರದ ಮಟ್ಟವನ್ನು ಮೋದಿಯವರು ಅಂದಾಜಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ಆದರೆ, ಎರಡು ವರ್ಷಗಳ ಬಳಿಕ ಇದೀಗ ಮತ್ತೆ ಲೋಕಸಮರ ಎದುರಾಗಿದೆ. ಮತ್ತೊಮ್ಮೆ ಪ್ರಧಾನಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಅಪನಗದೀಕರಣದ ಸಂದರ್ಭದಲ್ಲಿ ಪ್ರಧಾನಿಗಳ ವಿರುದ್ಧ ಧ್ವನಿ ಎತ್ತಿದ್ದ ಬಾಬಾ ಈ ಚುನಾವಣೆ ಸಂದರ್ಭಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುವುದು ಕುತೂಹಲವಾಗಿತ್ತು.
ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರು ಮೋದಿ ಸರಕಾರವನ್ನು ಹಾಗೂ ಬಿಜೆಪಿ ಪಕ್ಷವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮೋದಿ ಪರವಾದ ಒಲವನ್ನೇ ಬಾಬಾ ಹೊಂದಿದ್ದಾರೆ. ಆ ಮೂಲಕ ನೋಟ್ ಬ್ಯಾನ್ ಸಂದರ್ಭದ ಅಸಮಾಧಾನಕ್ಕೆ ರಾಮ್ ದೇವ್ ತೆರೆ ಎಳೆದಿದ್ದಾರೆ.