ಭುವನೇಶ್ವರ, ಮೇ04(Daijiworld News/SS): ಫೋನಿ ಚಂಡಮಾರುತದ ಸುಳಿವು ಆಮೆಗಳಿಗೆ ಮೊದಲೇ ಸಿಕ್ಕಿದ್ದರಿಂದಲೇ ಅವು ಕಡಲ ತೀರಕ್ಕೆ ಆಗಮಿಸಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಪೂರ್ವ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಿದೆ. ಆಂಧ್ರದಲ್ಲಿ ಸ್ವಲ್ಪಮಟ್ಟಿಗೆ ಹಾನಿ ಮಾಡಿ ಇದೀಗ ಒಡಿಶಾ ಮತ್ತು ಬಂಗಾಳದ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಪ್ರಾಣಿ - ಪಕ್ಷಿಗಳಿಗೆ ಈ ನೈಸರ್ಗಿಕ ವಿಕೋಪ ದುರಂತಗಳ ಬಗ್ಗೆ ಮೊದಲೇ ಸುಳಿವು ಸಿಗುತ್ತದೆ ಎಂಬುವುದಕ್ಕೆ ಈ ಬಾರಿಯೂ ನಡೆದ ಘಟನೆಯೊಂದು ಪುಷ್ಠಿ ನೀಡಿದೆ.
ಋುಷಿಕುಲ್ಯಾ ಕಡಲತೀರದಲ್ಲಿ ಓಲಿವ್ ರಿಡ್ಲೀ ಜಾತಿಯ ಆಮೆಗಳು ಪ್ರತೀ ವರ್ಷ 5 ಲಕ್ಷದಷ್ಟು ಸಂಖ್ಯೆಯಲ್ಲಿ ಸಂತಾನಕ್ಕಾಗಿ ಗೂಡು ಕಟ್ಟುತ್ತವೆ. ಆದರೆ, ಈ ವರ್ಷ ಆಮೆಗಳ ಗೂಡುಗಳ ಪ್ರಮಾಣ ಕೇವಲ 3 ಸಾವಿರ ಮಾತ್ರವಿತ್ತು. ಭಾರೀ ನೈಸರ್ಗಿಕ ಗಂಡಾಂತರ ಸಂಭವಿಸುವುದನ್ನು ಮೊದಲೇ ಗ್ರಹಿಸಿದ ಈ ಪ್ರಾಣಿಗಳು ಮುನ್ನೆಚ್ಚರಿಕೆಯಾಗಿ ಇಲ್ಲಿಗೆ ಬಂದು ಗೂಡು ಕಟ್ಟಿಲ್ಲ ಎಂಬ ಮಾತು ಕೇಳಿಬರುತ್ತಿವೆ.
ಒಡಿಶಾ ಕರಾವಳಿಯಲ್ಲಿ ಸಾಮೂಹಿಕ ಮೊಟ್ಟೆಇಡುವ ವಿದ್ಯಮಾನ ಆರಂಭವಾಗಿದ್ದರೂ ಆಮೆಗಳು ಕಡಲ ತೀರಕ್ಕೆ ಆಗಮಿಸುತ್ತಲೇ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿವರ್ಷ ಆಲಿವ್ ರಿಡ್ಲೆ ಆಮೆಗಳ ಸಾಮೂಹಿಕ ಮೊಟ್ಟೆಇಡುವ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದ ಒಡಿಶಾದ ಗಂಜಾಮ್ ಜಿಲ್ಲೆಯ ಋುಷಿಕುಲ್ಯಾ ರೂಕೆರಿ ಕಡಲ ತೀರಕ್ಕೆ ಈ ಬಾರಿ ಆಮೆಗಳೇ ಆಗಮಿಸಿಲ್ಲ ಎಂದು ಹೇಳಲಾಗುತ್ತಿದೆ.
ಎಪ್ರಿಲ್, ಮೇ ತಿಂಗಳಿನ ಬೇಸಿಗೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತಿದ್ದ ಆಮೆಗಳು ಈ ಸಲ 3000ಕ್ಕಿಂತಲೂ ಕಡಿಮೆ ಮೊಟ್ಟೆಇಟ್ಟಿವೆ. ಫೋನಿ ಚಂಡಮಾರುತದ ಸುಳಿವು ಮೊದಲೇ ಸಿಕ್ಕಿದ್ದರಿಂದಲೇ ಅವು ಕಡಲ ತೀರಕ್ಕೆ ಆಗಮಿಸಿಲ್ಲ ಎಂದು ಹೇಳಲಾಗುತ್ತಿದೆ.
ಒಡಿಶಾದ ಕರಾವಳಿ ಮೆಕ್ಸಿಕೊ ಮತ್ತು ಕೋಸ್ಟಾರಿಕಾ ಬಳಿಕ ಆಲಿವ್ ರೆಡ್ಲೆ ಆಮೆಗಳ ಮೊಟ್ಟೆಇಡುವ ಅತಿದೊಡ್ಡ ಸ್ಥಳ ಎನಿಸಿಕೊಂಡಿದೆ. 1991ರಲ್ಲಿ ಆರು ಲಕ್ಷಕ್ಕೂ ಅಧಿಕ ಆಮೆಗಳು ಒಂದು ವಾರದಲ್ಲಿ ಮೊಟ್ಟೆಇಟ್ಟಿದ್ದವು. ಕಳೆದ ವರ್ಷ 4.75 ಲಕ್ಷ ಆಮೆಗಳು ಮೊಟ್ಟೆಇಟ್ಟಿದ್ದವು. ಈ ಸಂಖ್ಯೆ ಈ ವರ್ಷ ಕೇವಲ 3000ಕ್ಕೆ ಇಳಿದಿದೆ.