ಬೆಂಗಳೂರು,ಮೇ 04 (Daijiworld News/MSP): ಮನೆಯಲ್ಲೇ 500 ಹಾಗೂ 2 ಸಾವಿರ ಮುಖಬೆಲೆಯ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಬಿಎಂಟಿಸಿ ಸಿಬ್ಬಂದಿಯಾದ ಚಾಲಕ ಹಾಗೂ ನಿರ್ವಾಹಕ, ಸೇರಿದಂತೆ ಮೂವರನ್ನು ಯಲಹಂಕ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಏಪ್ರಿಲ್ 26ರಂದು ನಗರದ ಯಲಹಂಕದ ಕೋಗಿಲು ಕ್ರಾಸ್ ಬಳಿ ಐವತ್ತು ಲಕ್ಷ ರೂ ಖೋಟಾ ನೋಟು ಇರಿಸಿಕೊಂಡು ಚಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಬಿಎಂಟಿಸಿಯ ಜಯನಗರ ಡಿಪೊ ನಿರ್ವಾಹಕ ರಾಯಚೂರಿನವನಾದ ಸೋಮನಗೌಡ ಅಲಿಯಾಸ್ ಸೋಮ (38) ಹಾಗೂ ಚನ್ನರಾಯಪಟ್ಟಣದ ಚಾಲಕ ನಂಜೇಗೌಡ ಅಲಿಯಾಸ್ ಸ್ವಾಮಿ (32) ಬಂಧಿತರು. ಕೃತ್ಯಕ್ಕೆ ಸಹಕರಿಸಿದ್ದಕ್ಕೆ ಅವರ ಜತೆ ಹಾಸನದ ಸ್ಟುಡಿಯೊ ಛಾಯಾಗ್ರಾಹಕ ಕಿರಣ್ ಕುಮಾರ್ (24) ಕೂಡ ಜೈಲು ಸೇರಿದ್ದಾನೆ. ಬಂಧಿತರಿಂದ 81.30 ಲಕ್ಷ ಮೌಲ್ಯದ ಖೋಟಾ ನೋಟು ಹಾಗೂ ಖೋಟಾ ನೋಟು ತಯಾರಿಸಲು ಬಳಸುತ್ತಿದ್ದ ಕಂಪ್ಯೂಟರ್ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ದಂಧೆಯ ರೂವಾರಿ ರಾಮಕೃಷ್ಣ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ದಂಧೆಯ ರೂವಾರಿ ರಾಮಕೃಷ್ಣ, ಸೋಮನಗೌಡನಿಗೆ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿದ್ದ. ಸೋಮನಗೌಡ ಒಂದು ಲಕ್ಷ ಕೊಟ್ಟಾಗ ಅದನ್ನು 2 ಲಕ್ಷ ಮಾಡಿ ನೀಡಿದ್ದ. ಇದರಿಂದ ಹಣದ ಆಸೆಗೆ ಬಿದ್ದ ಸೋಮನಗೌಡ ತನ್ನ ಜಮೀನು ಮಾರಿ 7.5 ಲಕ್ಷ ನೀಡಿ ಮತ್ತೆ ಡಬ್ಲಿಂಗ್ ಮಾಡಿಕೊಡುವಂತೆ ತಿಳಿಸಿದ್ದ. ಆದರೆ ರಾಮಕೃಷ್ಣನಿಗೆ ನೀಡಿದ ಹಣ ಆರು ತಿಂಗಳು ಕಳೆದರೂ ವಾಸಾಸ್ ಬಾರದೆ ಇದ್ದಾಗ ಸೋಮನಗೌಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಆಗ ಸಾಯುವ ಮಾತು ಬೇಡ ಎಂದು ಸೋಮನಗೌಡನಿಗೆ ರಾಮಕೃಷ್ಣನಿಗೆ ಖೋಟಾ ನೋಟು ಮುದ್ರಿಸೋದನ್ನ ನಿಮಗೆ ಹೇಳಿಕೊಡ್ತೀನಿ. ಎಷ್ಟಾದರೂ ಹಣ ಮಾಡಿಕೊಳ್ಳಿ ಎಂದು ನೋಟು ಮುದ್ರಿಸುವ ತಂತ್ರವನ್ನು ಸೋಮನಗೌಡನಿಗೂ ಹೇಳಿಕೊಟ್ಟಿದ್ದ. ಇಲ್ಲಿಂದ ಇವರ ನಕಲಿ ನೋಟುಗಳ ಮುದ್ರಣ ದಂಧೆ ಪ್ರಾರಂಭವಾಗಿತ್ತು.