ನವದೆಹಲಿ, ಮೇ04(Daijiworld News/SS): ಮೋದಿಗಿಂತಲೂ ಚೆನ್ನಾಗಿ ಭಯೋತ್ಪಾದನೆಯ ಪಿಡುಗನ್ನು ನಿಭಾಯಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರಗಾಮಿ ಮಸೂದ್ ಅಜರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಆತನನ್ನು ಪಾಕಿಸ್ತಾನಕ್ಕೆ ಮರಳಿ ಕಳಿಸಿದ್ದು ಯಾರು..? ಭಯೋತ್ಪಾದನೆಗೆ ಶರಣಾಗಿ ಆತನ ಬಿಡುಗಡೆ ಮಾಡಿದವರು ಯಾರು..? ಕಾಂಗ್ರೆಸ್ ಅಲ್ಲ. ಅಂದಿನ ಬಿಜೆಪಿ ಸರಕಾರವೇ ಇದನ್ನು ಮಾಡಿತ್ತು ಎಂದು ರಾಹುಲ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿಯನ್ನು ನಿರ್ನಾಮ ಮಾಡಿದೆ. ನಮ್ಮ ಪ್ರಕಾರ ಬಿಜೆಪಿ ಸೋಲುತ್ತದೆ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದರು.
5 ವರ್ಷಗಳ ಹಿಂದೆ, ಮೋದಿ ಇನ್ನು 10-15 ವರ್ಷ ಆಡಳಿತ ನಡೆಸುತ್ತಾರೆ. ಅವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಅದೊಂದು (ಮೋದಿ ಸರಕಾರ) ಪೊಳ್ಳು ವ್ಯವಸ್ಥೆ. ಇನ್ನು 10-20 ದಿನಗಳಲ್ಲಿಯೇ ಅದು ತಾನಾಗಿ ಪತನವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ ಸರ್ಜಿಕಲ್ ದಾಳಿಯು ವೀಡಿಯೋ ಗೇಮ್ಗಳಲ್ಲಷ್ಟೇ ನಡೆದಿತ್ತು ಎಂದು ಮೋದಿ ಹೇಳಿದ್ದರು. ಈ ಮೂಲಕ ಮೋದಿ ಕಾಂಗ್ರೆಸ್ಸನ್ನು ಅವಮಾನಿಸಿದ್ದರು. ಮಾತ್ರವಲ್ಲ, ಸೇನೆಯನ್ನು ಕೂಡ ಅವಮಾನಿಸಿದರು. ಆದರೆ ನಾವು ನರೇಂದ್ರ ಮೋದಿಗಿಂತಲೂ ಚೆನ್ನಾಗಿ ಭಯೋತ್ಪಾದನೆಯ ಪಿಡುಗನ್ನು ನಿಭಾಯಿಸುತ್ತೇವೆ ಎಂದು ತಿಳಿಸಿದರು.
ರಫೇಲ್ ವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಟ್ಯಂತರ ರೂಪಾಯಿ ಕದ್ದಿದ್ದಾರೆ. ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನೇ ಹಾಳುಗೆಡಹಿದ್ದಾರೆ. 2 ಕೋಟಿ ಉದ್ಯೋಗದ ಭರವಸೆ ನೀಡಿರುವ ಮೋದಿ, ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿದರು.