ನವದೆಹಲಿ, ಮೇ 04 (Daijiworld News/MSP): ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದಿರುವ ನಿರ್ದಿಷ್ಟ ದಾಳಿಗಳನ್ನು ಪ್ರಧಾನಿ ಮೋದಿ ವಿಡಿಯೊ ಗೇಮ್ಸ್ ಗೆ ಹೋಲಿಸುವ ಮೂಲಕ ಮಾಡಿದ ಅಪಮಾನ ಕಾಂಗ್ರೆಸ್ ಪಕ್ಷಕ್ಕೆ ಮಾಡಿದ ಅವಮಾನ ಅಲ್ಲ, ಇದು ಸೇನೆಗೆ ಆದ ಅವಮಾನ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೂ ಎಂದು ಕೂಡಾ ಸೇನೆಯನ್ನು ರಾಜಕೀಯಗೊಳಿಸುವುದಿಲ್ಲ. ಸೇನೆಯು ನಮ್ಮ ದೇಶಕ್ಕೆ ಸೇರಿದ ಅಮೂಲ್ಯ ಆಸ್ತಿಯಾಗಿದ್ದು, ಅದು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಇದನ್ನು ನಾವು ಗೌರವಿಸಲು ಕಲಿಯಬೇಕಿದೆ ಎಂದು ಮೋದಿಗೆ ಟಾಂಗ್ ನೀಡಿದರು.
ಈ ದೇಶದ ಭೂಸೇನೆ, ವಾಯುಸೇನೆ ಅಥವಾ ನೌಕಾಪಡೆ ನರೇಂದ್ರ ಮೋದಿಯವರ ಖಾಸಗಿ ಸೊತ್ತಲ್ಲ. ಒಂದು ವೇಳೆ ಅವರು ಅದು ಅವರ ಆಸ್ತಿ ಎಂದು ಯೋಚನೆ ಮಾಡಿದ್ದರೆ ಅದು ಖಂಡನೀಯ. ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನ್ನು ವಿಡಿಯೊ ಗೇಮ್ ನಲ್ಲಿ ಮಾಡಿದ್ದರು ಎಂದು ಹೇಳುವ ಮೂಲಕ ಮೋದಿಯವರು ಸೇನೆಗೆ ಅವಮಾನ ಮಾಡಿದ್ದಾರೆ. ಸೇನೆಯನ್ನು ಅವಮಾನಿಸುವಾಗ ಪ್ರಧಾನ ಮಂತ್ರಿಗಳಿಗೆ ಕನಿಷ್ಟ ಸೌಜನ್ಯ ಮತ್ತು ಪ್ರಜ್ಞೆ ಇರಬೇಕಿತ್ತು. ಸೇನೆ ಮೋದಿಯವರ ಸ್ವತ್ತಲ್ಲ. ನಿರ್ದಿಷ್ಟ ದಾಳಿಯನ್ನು ಸೇನೆ ಮಾಡಿದೆ ಎನ್ನುವುದನ್ನು ಮೋದಿ ಮರೆಯಬಾರದು ಎಂದು ಹೇಳಿದರು.
ಇನ್ನು ಚೌಕಿದಾರ್ ಚೋರ್ ಹೈ ಸುಪ್ರಿಂ ಮುಂದೆ ಕ್ಷಮೆಯಾಚಿಸಿದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ "ಚೌಕಿದಾರ್ ಚೋರ್ ಹೈ " ಎಂಬವುದು ನಮ್ಮ ಘೋಷವಾಕ್ಯ. ಅದು ಮುಂದುವರಿಯುತ್ತದೆ. ನಾನು ಕ್ಷಮೆ ಯಾಚನೆ ಮಾಡಿರುವುದು ನ್ಯಾಯಾಲಯದ ಮುಂದೆ. ನಾನು ಬಿಜೆಪಿ ಅಥವಾ ಮೋದಿಯ ಮುಂದೆ ಕ್ಷಮೆಯಾಚಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.