ಬೆಂಗಳೂರು, ಮೇ04(Daijiworld News/SS): 2019ರ ಶೈಕ್ಷಣಿಕ ವರ್ಷದಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ತಗ್ಗಲಿದ್ದು, ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ ಎಂಬ ಆದೇಶ ಹೊರಡಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು, ಬ್ಯಾಗ್ನ ತೂಕ ಮಕ್ಕಳ ದೇಹ ತೂಕದ ಶೇ 10ಕ್ಕಿಂತ ಅಧಿಕ ಇರಬಾರದು ಎಂದು ತಿಳಿಸಲಾಗಿದೆ.
ಡಾ. ವಿ.ಪಿ ನಿರಂಜನಾರಾಧ್ಯ ನೇತೃತ್ವದ ಪರಿಣಿತರ ಸಮಿತಿ 2016–17ನೇ ಸಾಲಿನಲ್ಲೇ ಈ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಆದೇಶ ಹೊರಡಿಸುವುದಕ್ಕೆ ಹಿಂದೇಟು ಹಾಕಿತ್ತು. ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಬ್ಯಾಗ್ ತೂಕ ಎಷ್ಟಿರಬೇಕು ಎಂಬ ಮಿತಿಯನ್ನೂ ನೀಡಲಾಗಿದೆ.
1 - 2ನೇ ತರಗತಿ ಮಕ್ಕಳ ಬ್ಯಾಗ್ ತೂಕ 1.5ರಿಂದ 2 ಕೆ.ಜಿ.ಯಷ್ಟು, 3 - 5ನೇ ತರಗತಿ ಮಕ್ಕಳ ಬ್ಯಾಗ್ 2ರಿಂದ 3 ಕೆ.ಜಿ.ಯೊಳಗೆ, 6–8ನೇ ತರಗತಿ ಮಕ್ಕಳ ಬ್ಯಾಗ್ 3.4 ಕೆ.ಜಿ, 9–10ನೇ ತರಗತಿ ಮಕ್ಕಳ ಬ್ಯಾಗ್ 4.5 ಕೆ.ಜಿ.ಯೊಳಗೆಯೇ ಇರಬೇಕು ಎಂದು ಸೂಚಿಸಲಾಗಿದೆ.
ಮಾತ್ರವಲ್ಲ 1 ಮತ್ತು 2ನೇ ತರಗತಿಯ ಮಕ್ಕಳಿಗೆ ಮನೆ ಕೆಲಸ (ಹೋಂ ವರ್ಕ್) ಕೊಡಬಾರದು ಎಂದು ಸರ್ಕಾರ ಸೂಚಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆ ಈ ಆದೇಶ ನೀಡಲಾಗಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಶಾಲೆಗಳಲ್ಲಿ ‘ಬ್ಯಾಗ್ ರಹಿತ ದಿನ’ ಆಚರಿಸಬೇಕು ಎಂದು ತಿಳಿಸಿದೆ.