ಚಂಡೀಗಢ,ಮೇ4(DaijiworldNews/AZM):ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಬಿಟ್ಟಿಲ್ಲ ವಂಚಕರು. ದೇಶಕ್ಕಾಗಿ ಪ್ರಾಣತೆತ್ತ ಯೋಧನ ಕುಟುಂಬದವರನ್ನೇ ವಂಚಿಸಿದ ಘಟನೆ ವರದಿಯಾಗಿದೆ.
ಹುತಾತ್ಮ ಯೋಧನ ಪಾಲಕರಿಗೆ ಸಿಆರ್ಪಿಎಫ್ನಿಂದ ಧನಸಹಾಯ ಕೊಡಿಸುವುದಾಗಿ ನಂಬಿಸಿ ಸುಮಾರು 1.5 ಲಕ್ಷ ರೂ. ವನ್ನು ವಂಚಿಸಿ ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ.
ಘಟನೆಯ ವಿವರ:
ಪಂಜಾಬ್ನ ರೋಪರ್ ಜಿಲ್ಲೆಯ ರೌಲಿ ಗ್ರಾಮದ ಹುತಾತ್ಮ ಯೋಧ ಕುಲ್ವಿಂದರ್ ಸಿಂಗ್ ಪಾಲಕರನ್ನು ಭೇಟಿಯಾದ ವಂಚಕ ಸಿಆರ್ಪಿಎಫ್ನಿಂದ 29 ಲಕ್ಷ ರೂ. ಮತ್ತು ಒಂದು ಪೆಟ್ರೋಲ್ ಬಂಕ್ ಕೊಡಿಸುವುದಾಗಿ ಹೇಳಿಕೊಂಡು ಅವರನ್ನು ನಂಬಿಸಿದ್ದ.
ಸಿಆರ್ಪಿಎಫ್ನಿಂದ ಧನಸಹಾಯ ಬರಬೇಕಾದರೆ ನಿಮ್ಮ ಖಾತೆಯಲ್ಲಿ ಹಣವಿರಬಾರದು. ಖಾತೆಯಲ್ಲಿರುವ ಹಣವನ್ನು ವಿತ್ಡ್ರಾ ಮಾಡಿ ಎಂದು ಆತ ತಿಳಿಸಿದ್ದಾನೆ. ವಂಚಕನ ಮಾತನ್ನು ನಂಬಿದ ಕುಲ್ವಿಂದರ್ ಪಾಲಕರು ಆತನೊಂದಿಗೆ ಬ್ಯಾಂಕ್ಗೆ ತೆರಳಿದ್ದಾರೆ. ಮೊದಲಿಗೆ 20 ಲಕ್ಷ ರೂ. ಹಣ ತೆಗೆಯುವಂತೆ ಆತ ತಿಳಿಸಿದ್ದಾನೆ. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಷ್ಟು ದೊಡ್ಡ ಪ್ರಮಾಣ ಹಣ ವಿತ್ಡ್ರಾ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಕೊನೆಗೆ ಆತ 1.5 ಲಕ್ಷ ರೂ.ಗಳನ್ನು ವಿತ್ಡ್ರಾ ಮಾಡಿಸಿದ್ದಾನೆ. ಸಿಆರ್ಪಿಎಫ್ಗೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕು ಅದರ ಅಫಿಡವಿಟ್ ಮಾಡಿಸಬೇಕೆಂದು ಹುತಾತ್ಮ ಯೋಧನ ತಂದೆಯನ್ನು ಕೋರ್ಟ್ಗೆ ಕರೆದೊಯ್ದಿದ್ದಾನೆ. ಅಲ್ಲಿ ಯೋಧನ ತಾಯಿಯೂ ಇರಬೇಕು, ಅವರನ್ನು ಬ್ಯಾಂಕ್ನಿಂದ ಕರೆತರುತ್ತೇನೆ ಎಂದು ವಂಚಕ ಯೋಧನ ತಂದೆಯ ದ್ವಿಚಕ್ರ ವಾಹನ ಮತ್ತು ಹಣ ಪಡೆದು ಅಲ್ಲಿಂದ ತೆರಳಿದ್ದಾನೆ.
ಎಷ್ಟು ಹೊತ್ತು ಕಾದರೂ ವಂಚಕ ಮರಳದಿದ್ದಾಗ ಯೋಧನ ಪಾಲಕರಿಗೆ ತಾವು ವಂಚನೆಗೊಳಗಾಗಿರುವುದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.