ಬೆಂಗಳೂರು,ಮೇ4(DaijiworldNews/AZM):ಅಂಡಮಾನ್ ಮತ್ತು ನಿಕೋಬಾರ್ ಗೆ ಪ್ರವಾಸಕ್ಕೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರನ್ನು ರಾಜ್ಯ ಸರ್ಕಾರದ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿದೆ.
ಪ್ರವಾಸದಲ್ಲಿದ್ದ ಮೂಡಿಗೆರೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶಶಿಕಲಾ ಅವರು ತಮ್ಮ ಸಮಸ್ಯೆಯನ್ನು ದೂರವಾಣಿ ಮೂಲಕ ಇಂದು ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ತಂದಿದ್ದು, ಈ ಕಡೆ ಗಮನಹರಿಸಿದ ಮುಖಮಂತ್ರಿಗಳು ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿರುವ ನಿವಾಸಿ ಆಯುಕ್ತರಿಗೆ ಸೂಚಿಸಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ದೆಹಲಿಯ ನಿವಾಸಿ ಆಯುಕ್ತರು ಸಮಸ್ಯೆಯನ್ನು ಬಗೆಹರಿಸಿದ್ದು, ನಾಳೆ ಬೆಳಗಿನ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಲು ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.