ಬೆಂಗಳೂರು,ಮೇ05(DaijiworldNews/AZM):ಮೇ 23ರಂದು ನಗರದ ಮೂರು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಈ ಹಿನ್ನಲೆ ವಿದ್ಯುನ್ಮಾನ ಮತಯಂತ್ರ, ವಿ.ವಿ. ಪ್ಯಾಟ್ ಸಂಗ್ರಹಿಸಿಟ್ಟಿರುವ ಸ್ಟ್ರಾಂಗ್ ರೂಂ ಭದ್ರತೆ ಹಾಗೂ ಮತ ಎಣಿಕೆ ಕೇಂದ್ರಗಳ ಸಿದ್ಧತೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಶನಿವಾರ ಜಂಟಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಮತ ಎಣಿಕೆ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರ ಸಂಗ್ರಹಿಸಿರುವ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ), ಬೆಂಗಳೂರು ಉತ್ತರ ಕ್ಷೇತ್ರದ ಇವಿಎಂ ಶೇಖರಿಸಿರುವ ಮಲ್ಯ ಆಸ್ಪತ್ರೆ ರಸ್ತೆಯ ಸೆಂಟ್ಜೋಸಫ್ ಪ್ರೌಢಶಾಲೆ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಇವಿಎಂ ಯಂತ್ರಗಳನ್ನು ಹೊಂದಿರುವ ಜಯನಗರದ ಎಸ್ಎಸ್ಎಂಆರ್ವಿ ಕಾಲೇಜಿನ ಸ್ಟ್ರಾಂಗ್ ರೂಂ ಭದ್ರತೆಯನ್ನು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಪರಿಶೀಲನೆ ನಡೆಸಿದ್ದು, ಮೇ 23ರಂದು ಇದೇ ಕಾಲೇಜುಗಳಲ್ಲಿ ನಡೆಯುವ ಮತ ಎಣಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಮೇ 23ರಂದು ನಗರದ ಮೂರು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದ್ದು, ಆಯಾ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಸಂಬಂಧಪಟ್ಟ ಕೇಂದ್ರದಲ್ಲಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಕಾರ್ಯಕ್ಕಾಗಿ 1,080 ಅಧಿಕಾರಿಗಳ ಅಗತ್ಯವಿದ್ದು, ಹೆಚ್ಚುವರಿಯಾಗಿ ಶೇ.30 ರಷ್ಟು(325) ಸಿಬ್ಬಂದಿ ಸೇರಿದಂತೆ 1,405 ಮಂದಿ ಅಧಿಕಾರಿಗಳ ನೇಮಕಕ್ಕೆ ಆದೇಶಿಸಿದ್ದೇವೆ. ಜತೆಗೆ ಸಹಾಯಕರು ಸೇರಿ ಮೂರೂ ಕ್ಷೇತ್ರದ ಮತ ಎಣಿಕೆಗೆ 2 ಸಾವಿರ ಅಧಿಕಾರಿ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಗೊಂದಲ ರಹಿತವಾಗಿ ಎಣಿಕೆ ಪ್ರಕ್ರಿಯೆ ನಡೆಯಲು ಮೇ 16 ಮತ್ತು ಮೇ 22ರಂದು ಎರಡು ಹಂತದಲ್ಲಿ ಮತ ಎಣಿಕಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದಿದ್ದಾರೆ.
ಮತ ಎಣಿಕೆ ದಿನ ಮೊದಲು ಅಂಚೆ ಮತ ಎಣಿಕೆ ನಡೆಸಿ ಬಳಿಕ ಇವಿಎಂ ಮತ ಎಣಿಕೆ ನಡೆಸಲಿದ್ದೇವೆ. ಮತ ಎಣಿಕೆ ಕಾರ್ಯ ಮುಕ್ತಾಯದ ಬಳಿಕ ಗೆಲುವಿನ ಅಂತರ ಅಂಚೆ ಮತ ಪತ್ರಗಳಿಗಿಂತ ಕಡಿಮೆ ಇದ್ದರೆ ಮತ್ತೊಂದು ಬಾರಿ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಬೇಕೆಂದು ಆಯೋಗ ಈ ಬಾರಿ ಹೊಸ ಸೂಚನೆ ನೀಡಿದೆ. ಅದರಂತೆ ಅಂಚೆ ಮತಗಳಿಂತ ಕಡಿಮೆ ಅಂತರ ಬಂದರೆ ಮತ್ತೊಂದು ಬಾರಿ ಅಂಚೆ ಬ್ಯಾಲೆಟ್ ಎಣಿಕೆ ಮಾಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಸುಪ್ರಿಂ ಕೋರ್ಟ್ ಹಾಗೂ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನ ಸಭಾ ಕ್ಷೇತ್ರದ ಐದು ವಿವಿ ಪ್ಯಾಟ್ಗಳ ಮತಪತ್ರ (ಬ್ಯಾಲೆಟ್) ಎಣಿಕೆ ನಡೆಸಲಾಗುವುದು. ಎಣಿಕೆ ಮಾಡುವ ವಿವಿ ಪ್ಯಾಟ್ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಆಯ್ಕೆಯಾದ ವಿವಿ ಪ್ಯಾಟ್ಗಳನ್ನು ಒಂದರ ಬಳಿಕ ಒಂದರಂತೆ ಎಣಿಕೆ ಮಾಡಲಾಗುವುದು. ಎಲ್ಲಾ ಎಣಿಕೆ ಮುಕ್ತಾಯದ ಬಳಿಕವಷ್ಟೇ ಅಂತಿಮ ಹಾಗೂ ಅಧಿಕೃತ ಫಲಿತಾಂಶ ಘೋಷಿಸಲಾಗುವುದು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಬೆಳಗ್ಗೆಯಿಂದ ಆರಂಭವಾಗುವ ಮತ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೂ ವಿಡಿಯೋ ಮಾಡಲಾಗುವುದು. ಅದನ್ನು ಪ್ರತಿಯೊಬ್ಬ ಸ್ಪರ್ಧಿಗಳಿಗೆ ಸಿಡಿ ಮಾಡಿ ಉಚಿತವಾಗಿ ವಿತರಣೆ ಮಾಡುವಂತೆ ಆಯೋಗ ಸೂಚನೆ ನೀಡಿದೆ. ಅದರಂತೆ ವಿಡಿಯೋ ಎಡಿಟ್ ಇಲ್ಲದೇ ಅಭ್ಯರ್ಥಿಗಳಿಗೆ ವಿತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.