ಉತ್ತರಪ್ರದೇಶ,ಮೇ05(DaijiworldNews/AZM):ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ಟಿಯೊಂದಿಗೆ ರಾಜೀವ್ ಗಾಂಧಿ ಅವರ ಬದುಕು ಅಂತ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು, ಈ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಉತ್ತರಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾಗಿದ್ದ 5ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. “ರಾಹುಲ್ ಗಾಂಧಿ ಅವರೇ ನಿಮ್ಮ ತಂದೆ ರಾಜೀವ್ ಗಾಂಧಿ 1980ರಲ್ಲಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬೊಫೋರ್ಸ್ ಹಗರಣ ನಡೆದಿತ್ತು. ಸೈನ್ಯಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ಸ್ವೀಡಿಶ್ ಮೂಲದ ಬೊಪೋರ್ಸ್ ಕಂಪೆನಿಯಿಂದ ರಾಜೀವ್ ಗಾಂಧಿ ದೊಡ್ಡ ಮೊತ್ತದ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ಟಿಯೊಂದಿಗೆ ಅವರ ಬದುಕು ಅಂತ್ಯವಾಗಿತ್ತು” ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿ ವಿರುದ್ಧ ಬೊಪೋರ್ಸ್ ಹಗರಣದಲ್ಲಿ ಕಮಿಷನ್ ಪಡೆದ ಆರೋಪ ಇದೆ. ಆದರೆ, ಈ ಆರೋಪ ಸಾಬೀತುಪಡಿಸಲು ಯಾವುದೇ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಈ ಹಿಂದೆಯೇ ನ್ಯಾಯಾಲಯ ತಿಳಿಸಿದ್ದು. ಈ ಪ್ರಕರಣದಿಂದ ರಾಜೀವ್ ಗಾಂಧಿಯನ್ನು ಖುಲಾಸೆ ಮಾಡಿತ್ತು.
ಭಾರತ ಸರ್ಕಾರ ರಷ್ಯಾ ಮೂಲದ ಡಸಾಲ್ಟ್ ಕಂಪೆನಿಯ ಜೊತೆ 36 ರಫೇಲ್ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಮೋದಿ ನೇತೃತ್ವದ ಸರ್ಕಾರ ಈ ಒಪ್ಪಂದದ ಮೂಲಕ ರಿಲಾಯನ್ಸ್ ಕಂಪೆನಿ ಮಾಲೀಕ ಉದ್ಯಮಿ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಲಾಭವಾಗುವಂತೆ ನೋಡಿಕೊಂಡಿದೆ. ಇದು ಭಾರತೀಯ ರಕ್ಷಣಾ ವ್ಯವಸ್ಥೆಯಲ್ಲೇ ನಡೆದಿರುವ ಅತಿದೊಡ್ಡ ಹಗರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿರುವ ಬೆನ್ನಲ್ಲೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.