ಚಿಕ್ಕಮಗಳೂರು, ಏ.16(DaijiworldNews/AK): ಒಂಬತ್ತು ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡ್ರಲ್ಲಾ ಅದಕ್ಕೆ ಡಿ.ಕೆ ಶಿವಕುಮಾರ್ ಅವರ ಕೈಯನ್ನ ಬಲಪಡಿಸಬೇಕಾ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ
ಮೂಡಿಗೆರೆ ತಾಲೂಕಿನಲ್ಲಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಮತಯಾಚನೆ ಮಾಡಿದ ದೇವೇಗೌಡರು, ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿರುವ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವರ ಕೈಯನ್ನ ಏಕೆ ಬಲಪಡಿಸಬೇಕು? 9 ವರ್ಷದ ಹುಡುಗಿಯನ್ನು ಎತ್ತುಕೊಂಡು ಹೋಗಿ ಆಸ್ತಿ ಬರೆಸಿಕೊಂಡರಲ್ಲಾ ಅದಕ್ಕಾ ಎಂದು ಪ್ರಶ್ನಿಸಿದ್ದಾರೆ.
ರಾಮನಗರದ ಬಿಡದಿ ಬಳಿ ಅಮೆರಿಕದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ ಅವರು ಒಂದು ಐಟಿ ಕಂಪನಿಯನ್ನ ಸ್ಥಾಪನೆ ಮಾಡಿದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಮಾಡುತ್ತಾರೆ. ಆಮೇಲೆ ಅವರ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಡುತ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಧಮ್ಕಿ ಹಾಕುತ್ತಾರೆ. ಆ ತಾಯಿ ಎಲ್ಲಾ ಬರೆದುಕೊಡು, ನನ್ನ ಮಗಳ ಕರೆದುಕೊಂಡು ಬಾರಪ್ಪಾ ಅಂತ ಆಕೆ ಗಂಡನ ಕಾಲು ಹಿಡಿಯುತ್ತಾಳೆ. ನನ್ನ ಬಳಿ ದಾಖಲೆ ಇದೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದ ದೇವೇಗೌಡರು.