ಬೆಂಗಳೂರು, ಏ.18(DaijiworldNews/AK):ರಾಜ್ಯದಲ್ಲಿ ಏ 18, 19 ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ (CET Exam) ನಡೆಯಲಿದೆ.
ಸಿಇಟಿ ಪರೀಕ್ಷೆ 2024 ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಫೆಬ್ರುವರಿ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿತ್ತು. ಈ ವರ್ಷ 3,49637 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸದ್ಯ ಮೂರು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿದೆ.ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷೆಗೆ ಬೆಂಗಳೂರಿನಲ್ಲಿಯೇ 167 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 737 ವೀಕ್ಷಕರು, 737 ವಿಶೇಷ ಜಾಗೃತ ದಳದ ಸದಸ್ಯರು 737 ಪ್ರಶ್ನೆಪತ್ರಿಕಾ ಪಾಲಕರು, 14568 ಕೊಠಡಿ ಮೇಲ್ವಿಚಾರಕರು 20300 ಅಧಿಕಾರಿ ವರ್ಗದವರ ನಿಯೋಜನೆ ಮಾಡಲಾಗಿದೆ.
ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಯುತ್ತಿದೆ.
ಎಲ್ಲ ಕೇಂದ್ರಗಳಲ್ಲೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದ್ದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ಗಣಿತ, ಎರಡನೇ ದಿನ ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಎಪ್ರಿಲ್ 20ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬಿಗಿ ಕ್ರಮಕ್ಕೆ ಇಲಾಖೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಉಪಕರಣ ಟ್ಯಾಬ್ಲೆಟ್ ಮೊಬೈಲ್ ಕ್ಯಾಲುಕುಲೇಟರ್, ಬ್ಲೂಟೂಥ್ ಕೈಗಾಡಿಯಾರ ಅವಕಾಶ ಇಲ್ಲ ಅಂತಾ ಸ್ಪಷ್ಟನೆ ನೀಡಿದೆ.ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಹೊಸ ನಿಯಮಗಳನ್ನ ಕೆಇಎ ಜಾರಿ ಮಾಡಿದೆ.