ನವದೆಹಲಿ,ಏ.18(DaijiworldNews/AK): 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಏ. 19ರಂದು(ಶುಕ್ರವಾರ) ನಡೆಯಲಿದ್ದು ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರ ಜೊತೆಗೆ ಅರುಣಾಚಲ ಮತ್ತು ಸಿಕ್ಕಿಂ ರಾಜ್ಯಗಳವಿಧಾನಸಭೆಗೂ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 134 ಮಹಿಳಾ ಅಭ್ಯರ್ಥಿಗಳು ಮತ್ತು1,491 ಪುರುಷ ಅಭ್ಯರ್ಥಿಗಳಿದ್ದಾರೆ.
ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಪೈಕಿ ಏ.19ರ ಮೊದಲ ಹಂತದಲ್ಲೇ ಅತಿ ಹೆಚ್ಚು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನ ಎಲ್ಲ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಹೆಚ್ಚು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ನಿತಿನ್ ಗಡ್ಕರಿ, ಕಿರಣ್ ರಿಜಿಜು, ಸರ್ಬಾನಂದ್ ಸೋನೋವಾಲ್, ಸಂಜೀವ್ ಬಲಿಯಾನ್, ಜಿತೇಂದ್ರ ಸಿಂಗ್, ಭೂಪೇಂದ್ರ ಯಾದವ್, ಅರ್ಜುನ್ ರಾಮ್ ಮೇಘಾ ಲ್ ಅವರು ಮೊದಲ ಹಂತದ ಚುನಾವಣ ಕಣದಲ್ಲಿರುವ ಕೇಂದ್ರ ಸಚಿವರು. ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರ್ರಾಜನ್ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಣ್ಣಾ ಮಲೈ, ಡಿಎಂಕೆಯ ಎ.ರಾಜಾ, ಕನಿಮೋಳಿ ಸಹಿತ ಇನ್ನೂ ಅನೇಕ ಪ್ರಮುಖರು ಕಣದಲ್ಲಿದ್ದಾರೆ. ಇವರ ಅದೃಷ್ಟ ಪರೀಕ್ಷೆ ನಾಳೆ ನಡೆಯಲಿದೆ.
ಅರುಣಾಚಲ ಪ್ರದೇಶ -2 ಅಸ್ಸಾಂ -5, ಬಿಹಾರ 4 ,ಛತ್ತೀ ಸ್ಗಢ -1, ಮಧ್ಯ ಪ್ರದೇಶ -6, ಮಹಾರಾಷ್ಟ್ರ-5, ಮಣಿಪುರ -2, ಮೇಘಾ ಲಯ -2, ರಾಜಸ್ಥಾನ -12, ತಮಿಳುನಾಡು -39, ಉತ್ತರ ಪ್ರದೇಶ -8, ಪಶ್ಚಿಮ ಬಂಗಾಲ -3 ಸಹಿತ ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀ ರ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂ ಡ್, ಪುದುಚೇರಿ, ಸಿಕ್ಕಿಂ ಮತ್ತು ಲಕ್ಷದ್ವೀಪಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಅರುಣಾಚಲದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ 50 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿಕ್ಕಿಂ ನಲ್ಲಿ 32
ವಿಧಾನಸಭೆ ಕ್ಷೇತ್ರಗಳಿವೆ. ಒಟ್ಟು 146 ಅಭ್ಯರ್ಥಿಗಳು ಕಣದಲ್ಲಿದ್ದಾರೆ.