ಬೆಂಗಳೂರು,ಮೇ05(DaijiworldNews/AZM):ಇಂದು ನೀಟ್ ಪರೀಕ್ಷೆ ನಡೆಯುತ್ತಿದ್ದು, ಈ ಹಿನ್ನಲೆ ದೂರ ದೂರದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರಲು ರೈಲನ್ನು ಅವಲಂಭಿಸಿದ್ದು, ರೈಲು ಗಳು ವಿಳಂಬವಾಗಿ ನೂರಾರು ನೀಟ್ ಪರೀಕ್ಷಾರ್ಥಿಗಳು ಪರೀಕ್ಷೆಯನ್ನು ಬರೆಯಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗೂ ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳ, ಬಳ್ಳಾರಿ ಭಾಗದಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದು ರೈಲು ವಿಳಂಬವಾಗಿದೆ. ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಕೇಂದ್ರದಲ್ಲಿ ಪರೀಕ್ಷೆ ನಿಗದಿಯಾಗಿದೆ. ಬಳ್ಳಾರಿಯಿಂದ ಬಂದ ಹಂಪಿ ಎಕ್ಸ್ಪ್ರೆಸ್ರೈಲಿನಲ್ಲಿ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಪರೀಕ್ಷೆ ವಂಚಿತರಾಗಿದ್ದಾರೆ. ಮಧ್ಯಾಹ್ನ 1 ಗಂಟೆಯಾದರೂ ರೈಲು ತುಮಕೂರಿನಲ್ಲಿದ್ದ ಕಾರಣ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೇರೆಯವರ ಸಾಧನೆಗೆ ನಿಮ್ಮ ಬೆನ್ನನ್ನು ನಿವೇ ತಟ್ಟಿಕೊಳ್ಳುತ್ತೀರಲ್ಲಾ, ನಿಮ್ಮ ಸಂಪುಟದ ಸಹುದ್ಯೋಗಿಯ ಅಸಮರ್ಥತೆಯ ಹೊಣೆಯನ್ನೂ ನೀವು ಹೊರಬೇಕು.ರೈಲುಗಳ ವಿಳಂಬದಿಂದ ಕರ್ನಾಟಕದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿರುದ್ದ ಆಕ್ರೋಶ ಹೊರ ಹಾಕಿ, ಇನ್ನು ಕೆಲವು ದಿವಸ ಸರಿಯಾಗಿ ಕೆಲಸ ಮಾಡಿ . ಆ ಬಳಿಕ ನಾವು ಸರಿ ಮಾಡುತ್ತೇವೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ ನೀಡುವ ಬಗ್ಗೆ ಖಚಿತಪಡಿಸಿ ಎಂದು ಬರೆದಿದ್ದಾರೆ.