ಲಖನೌ,ಮೇ05(DaijiworldNews/AZM): ದೇಶದಲ್ಲಿ 5ನೇ ಹಂತದ ಲೋಕಸಭಾ ಚುನಾವಣೆ ನಾಳೆ(ಮೇ 6ರಂದು ಸೋಮವಾರ) ನಡೆಯಲಿದ್ದು, ಈ ಹಿನ್ನಲೆ ಉತ್ತರ ಪ್ರದೇಶದ ಅಮೇಠಿ ಮತ್ತು ರಾಯಬರೇಲಿಯಲ್ಲಿ ಬಿಎಸ್ಪಿ ಮತ್ತು ಎಸ್ಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಮತ ಹಾಕಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಅಧಿಕೃತ ಸೂಚನೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಒಂದೇ. ಇಬ್ಬರೊಂದಿಗೂ ನಾವು ಮೈತ್ರಿ ಮಾಡಿಕೊಂಡಿಲ್ಲ. ಆದರೆ, ಬಿಜೆಪಿಯನ್ನು ಸೋಲಿಸಬೇಕು. ಅಮೇಠಿ ಮತ್ತು ರಾಯಬರೇಲಿಯಲ್ಲಿ ನಮ್ಮ ಮೈತ್ರಿ ಕೂಟ ಕಾಂಗ್ರೆಸ್ಗೆ ಮತ ಹಾಕಬೇಕು,' ಎಂದು ಅವರು ಹೇಳಿದ್ದಾರೆ.
'ಈ ಹಿಂದಿನ ನಾಲ್ಕು ಹಂತಗಳ ಮತದಾನದ ವೇಳೆ ಉತ್ತರ ಪ್ರದೇಶದಲ್ಲಿ ಜನತೆ ಎಸ್ಪಿ ಮತ್ತು ಬಿಎಸ್ಪಿಯನ್ನು ಬೆಂಬಲಿಸಿದ್ದಾರೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ. ನಮ್ಮ ಮೈತ್ರಿಯಿಂದ ಕೇಂದ್ರದಲ್ಲಿ ಹೊಸ ಪ್ರಧಾನಿಯಷ್ಟೇ ಆಯ್ಕೆಯಾಗುವುದಿಲ್ಲ. ಬದಲಿಗೆ, ಉತ್ತರ ಪ್ರದೇಶಕ್ಕೆ ಹೊಸ ಸರ್ಕಾರ ಸಿಗುತ್ತದೆ,' ಎಂದು ಅವರು ಹೇಳಿದ್ದಾರೆ. ನಿರಂಕುಶ ಮತ್ತು ಅಹಂಕಾರಿ ಆಡಳಿತದಿಂದ ಮೇ.23ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂದೂ ಮಾಯಾವತಿ ಹೇಳಿದ್ದಾರೆ.
ಅಮೇಠಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದರೆ, ರಾಯಬರೇಲಿಯಿಂದ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ..