ಹುಬ್ಬಳ್ಳಿ, ಏ 19 (DaijiworldNews/MS): ಹಾಡಹಗಲೇ ಕಾಲೇಜು ಕ್ಯಾಂಪಸ್ ನಲ್ಲಿ ಯುವತಿಯ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ, ಸಮಾಜ ಘಾತುಕ ಶಕ್ತಿಗಳಿಗೆ ಪೊಲಿಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದರಿಂದ ರಾಜಾರೋಷವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕಾಲೇಜು ಯುವತಿಯ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಅವರು ಹುಬ್ಬಳ್ಳಿಯಲ್ಲಿಂದು ನೇಹಾ ಪಾರ್ಥಿವ ಶರೀರ ಇರುವ ಕಿಮ್ಸ್ ಗೆ ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಆಘಾತಕರ ವಿಚಾರ. ಈ ರೀತಿ ಹುಬ್ಬಳ್ಳಿಯಲ್ಲಿ ಯಾವತ್ತೂ ನಡೆದಿಲ್ಲ. ಇದೊಂದು ಸಮಾಜದ ನಡುವೆ ಇರುವ ಕ್ಷೋಭೆ. ಸಮಾಜಗಳ ನಡುವೆ ಸಾಮರಸ್ಯ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗದಗನಲ್ಲಿ ನಮ್ಮ ನಗರ ಸಭೆಯ ಉಪಾಧ್ಯಕ್ಷರ ಕುಟುಂಬದ ಕಗ್ಗೊಲೆಯಾಗಿದೆ. ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಹೇಳಿದವರ ಮೆಲೆ ಹಲ್ಲೆಯಾಗಿದೆ. ಸಮಾಜ ಘಾತುಕ ಶಕ್ತಿಗಳಿಗೆ ಪೊಲಿಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಈ ಸರ್ಕಾರದಲ್ಲಿ ಗುಂಡಾಗಳನ್ನು ರಕ್ಷಿಸುವವರು ಇದ್ದಾರೆ ಎನ್ನುವ ನಂಬಿಕೆ ಇರುವುದರಿಂದ ಈ ರೀತಿ ಘಟನೆ ನಡೆಯುತ್ತಿವೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಣಗಿಸಬೇಕು. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳಬಾರದು ಎಂದು ಹೇಳಿದರು.
ಇದು ಕೇವಲ ವಯಕ್ತಿಕ ಘಟನೆಯಲ್ಲಿ ಇಡಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕವನ್ನು ಇನ್ನೊಂದು ಬಿಹಾರ ಆಗುತ್ತಿದೆ. ಗೃಹ ಸಚಿವರು, ಡಿಜಿಪಿ ಏನು ಮಾಡುತ್ತಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ. ಗದಗನಲ್ಲಿ ಕುಟುಂಬದ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.ಹುಬ್ಬಳ್ಳಿ ಕಮಿಷನರ್ ಹೇಳಿಕೆಗಳನ್ನುವ ನೋಡಿದಾಗ ಅವರು ಯಾವುದೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನೇಹಾ ಹತ್ಯೆ ಪ್ರಕರಣವನ್ನು ಎಸ್ ಐ ಟಿ ಮೂಲಕ ತನಿಖೆ ನಡೆಸಬೇಕು. ರಾಜ್ಯದಲ್ಲಿ ಎಲ್ಲ ಕುಟುಂಬಗಳು ಭಯಭೀತರಾಗಿದ್ದಾರೆ . ಅಪರಾಧ ವಿಭಾಗದ ಡಿಜಿಪಿ ಅವರು ಇದರ ಮುಂದಾಳತ್ವ ವಹಿಸಿ ತನಿಖೆ ನಡೆಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣದ ತಾರ್ಕಿಕ ಅಂತ್ಯ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು
ಹತ್ಯೆಗೀಡಾದ ನೇಹಾ ಅವರ ತಂದೆಗೆ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು, ಈ ರೀತಿಯ ಘಟನೆ ದುರದೃಷ್ಟಕರ ನಾವು ನಿಮ್ಮೊಂದಿಗಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.