ನಾಗಾಲ್ಯಾಂಡ್, ಏ 19 (DaijiworldNews/MS): ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಶುರುವಾಗಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಆದರೆ ನಾಗಾಲ್ಯಾಂಡ್ನ 6 ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಶೂನ್ಯ ಮತದಾನ ವರದಿಯಾಗಿದೆ.
ಹೆಚ್ಚಿನ ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್ಪಿಒ) 'ಸಾರ್ವಜನಿಕ ತುರ್ತು ಪರಿಸ್ಥಿತಿ' ಘೋಷಿಸಿ, ಈ ಚುನಾವಣೆಯನ್ನು ಬಹಿಷ್ಕರಿಸುವಂತೆ ಸ್ಥಳೀಯರಿಗೆ ಕರೆ ನೀಡಿತ್ತು. ಇದಕ್ಕೆ ಜನರು ಅಭೂತಪೂರ್ವವಾಗಿ ಸ್ಪಂದಿಸಿದ್ದು, ಮತದಾನದಿಂದ ದೂರ ಉಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ನ ಆರು ಜಿಲ್ಲೆಗಳಾದ ಸೋನ್, ಟ್ಯೂನ್ಸಾಂಗ್, ಲಾಂಗ್ಲೆಂಗ್, ಕಿಫಿರ್, ಶಮಾಟರ್ ಮತ್ತು ನೋಕ್ಲಾಕ್ನಲ್ಲಿ ಇಂದು ಬಹುತೇಕ ಶೂನ್ಯ ಮತದಾನ ಕಂಡಿದೆ.
ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಕ್ಕಾಗಿ ಈಶಾನ್ಯ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ENPO ಗೆ ನೋಟಿಸ್ ನೀಡಿದ್ದಾರೆ. ನಾಗಾಲ್ಯಾಂಡ್ ಒಂದು ಲೋಕಸಭಾ ಸ್ಥಾನವನ್ನು ಹೊಂದಿದ್ದು, 2018ರ ಉಪಚುನಾವಣೆಯಿಂದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಟೋಖೆಹೋ ಯೆಪ್ಥೋಮಿ ಇದನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಬಿಜೆಪಿಯ ಮಿತ್ರಪಕ್ಷವಾಗಿದೆ.