ನವದೆಹಲಿ, ಏ.21(DaijiworldNews/AA): ಬೋರ್ನ್ ವೀಟಾ ಸೇರಿ ವಿವಿಧ ಪಾನೀಯಗಳನ್ನು ಆರೋಗ್ಯ ಪಾನೀಯಗಳ ಪಟ್ಟಿಯಿಂದ ತೆಗೆದು ಹಾಕುವಂತೆ ಇ- ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಆರೋಗ್ಯ ಪಾನೀಯಗಳ ಕುರಿತು ಎಫ್ ಎಸ್ ಎಸ್ ಕಾಯ್ದೆ 2006ರ ಅಡಿ ವ್ಯಾಖ್ಯಾನಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಪಾನೀಯಗಳ ಕುರಿತು ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಕೆಲ ಪಾನೀಯಗಳಲ್ಲಿ ದೇಹಕ್ಕೆ ಅಗತ್ಯವಾದ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದ ಸಕ್ಕರೆ ಅಂಶವಿರುವುದು ಬಹಿರಂಗವಾಗಿತ್ತು.
ಈ ಹಿನ್ನೆಲೆ ಸಕ್ಕರೆ ಅಂಶ ಅಧಿಕವಿರುವ ಪಾನೀಯಗಳನ್ನು ಇ-ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಇರುವ ಆರೋಗ್ಯ ಪಾನೀಯಗಳ ವಿಭಾಗದಲ್ಲಿ ಪ್ರದರ್ಶಿಸಬಾರದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆದೇಶಿಸಿದೆ.
ಇನ್ನು ಇತ್ತೀಚೆಗಷ್ಟೇ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹಾಲಿನ ಉತ್ಪನ್ನ, ಕಾಳುಗಳು ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಇ-ಕಾಮರ್ಸ್ ವೇದಿಕೆಗಳಲ್ಲಿ ಆರೋಗ್ಯ ಪಾನೀಯಗಳು, ಶಕ್ತಿವರ್ಧಕ ಪೇಯಗಳೆಂದು ಪ್ರದರ್ಶನ ಮಾಡದಂತೆ ಇ-ಕಾಮರ್ಸ್ ಕಂಪನಿಗಳಿಗೆ ಸೂಚಿಸಲಾಗಿತ್ತು