ಶ್ರೀನಗರ, ಏ. 22(DaijiworldNews/AA): ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಅಧಿಕಾರಿಗಳು ಇಂದು ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ 9 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ, ದಾಳಿ ನಡೆಸಿದ 9 ಸ್ಥಳಗಳಲ್ಲಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತಯಬಾ, ಜೈಷ್ ಎ ಮೊಹಮ್ಮದ್, ಹಿಬ್ಬುಲ್ ಮುಜಾಹಿದ್ದೀನ್, ಅಲ್ ಬದರ್, ಅಲ್ ಖೈದಾಗಳು ರೂಪಿಸಿರುವ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಎನ್ ಐಎ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ರೂಪುಗೊಂಡಿರುವ ರೆಸಿಸ್ಟೆನ್ಸ್ ಫ್ರಂಟ್, ಯುನೈಟೆಡ್ ಲಿಬರೇಶನ್ ಫ್ರಂಟ್ ಜಮ್ಮು ಮತ್ತು ಕಾಶ್ಮೀರ, ಮುಜಾಹಿದ್ದೀನ್ ಗಜ್ಞಾತ್ ಉಲ್ ಹಿಂದ್, ಜಮ್ಮು ಮತ್ತು ಕಾಶ್ಮೀರ ಫ್ರೀಡಂ ಫೈಟರ್ಸ್, ಕಾಶ್ಮೀರ್ ಟೈಗರ್ಸ್ ಸಂಚುಗಳನ್ನು ಭೇದಿಸಲು ಎಎನ್ಐ ಈ ಕಾರ್ಯಾಚರಣೆ ನಡೆಸುತ್ತಿದೆ.